ಕೊಡಗು (ಮಡಿಕೇರಿ):ಕರುನಾಡ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ನಿನ್ನೆ ಹಬ್ಬದ ವಾತಾವರಣ ಮನೆಮಾಡಿತ್ತು. ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಕಾವೇರಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರ ದಂಡು ಅಲ್ಲಿ ನೆರೆದಿತ್ತು. ಪುರೋಹಿತರ ಮಂತ್ರ ಪಠಣ, ಭಕ್ತರ ಭಾವೋದ್ವೇಗದ ನಡುವೆ ಬ್ರಹ್ಮ ಕುಂಡಿಕೆಯಿಂದ ಗಂಗೆಯೊಂದಿಗೆ ಉಕ್ಕಿ ಬಂದ ಕಾವೇರಿ ಮಾತೆಯ ದರ್ಶನ ಪಡೆದು ಭಕ್ತರು ಧನ್ಯರಾದರು.
ಎತ್ತ ನೋಡಿದರೂ ಜನಸಾಗರ..ನಿಸರ್ಗದ ಸಿರಿಯ ನಡುವೆ ಸಡಗರ-ಸಂಭ್ರಮ. ದೇವಲೋಕವೇ ಧರೆಗಿಳಿದಂತೆ ಭಾಸವಾಗುತ್ತಿರುವ ಭೂಲೋಕ. ಕಾವೇರಿಯ ಸನ್ನಿಧಿಗೆ ದೇವಲೋಕದ ಕಳೆ. ಹೌದು ದಕ್ಷಿಣ ಗಂಗೆ ಕರುನಾಡ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯ ದೃಶ್ಯವಿದು.
ತಲಕಾವೇರಿಯಲ್ಲಿ ತೀರ್ಥೋದ್ಭವ.. ಬ್ರಹ್ಮ ಕುಂಡಿಕೆಯಲ್ಲಿ ತೀರ್ಥ ರೂಪಿಣಿಯಾದ ಕಾವೇರಿ:ಲೋಕ ಕಲ್ಯಾಣಾರ್ಥವಾಗಿ ನದಿಯಾಗಿ ಹರಿದ ಕಾವೇರಿ ಭಕ್ತರ ಕೋರಿಕೆಯಂತೆ ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಉಕ್ಕಿ ಬರುವ ಪುಣ್ಯಕಾಲ ತುಲಾ ಸಂಕ್ರಮಣದ ತೀರ್ಥೋದ್ಭವ. ಮೇಷ ಲಗ್ನದಲ್ಲಿ ನಿನ್ನೆ ಸಂಜೆ 7 ಗಂಟೆ 22 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಿಂದ ತೀರ್ಥ ಸ್ವರೂಪಿಣಿಯಾಗಿ ಬುಗ್ಗೆ ಬುಗ್ಗೆ ಉಕ್ಕಿ ಬಂದ ಕಾವೇರಿಯನ್ನು ಕಣ್ತುಂಬಿಕೊಂಡ ಭಕ್ತಗಣ ಜೈ ಜೈ ಮಾತಾ ಕಾವೇರಿ ಮಾತ, ಕಾವೇರಿ ಮಾತ ಜೈ ಜೈ ಮಾತ ಎಂದು ಹರ್ಷೋದ್ಘಾರ ಮಾಡುತ್ತಾ ಭಾವಪರವಶತೆಯಲ್ಲಿ ಮುಳುಗಿದ್ದರು.
ಪುರೋಹಿತರು ಮಹಾ ಸಂಕಲ್ಪ ಪೂಜೆ, ಮಹಾ ಪೂಜೆ, ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ಸೇರಿ ವಿವಿಧ ಪೂಜೆಗಳನ್ನ ನೆರವೇರಿಸಿದರು. ಬ್ರಹ್ಮ ಕುಂಡಿಕೆಯಿಂದ ಕಾವೇರಿ ಮಾತೆ ಉಕ್ಕಿ ಹರಿಯುತ್ತಿದ್ದಂತೆ ಅರ್ಚಕರು ಎಲ್ಲರೆಡೆಗೆ ತೀರ್ಥ ಪ್ರೋಕ್ಷಣೆ ಮಾಡಿ ಕಾವೇರಿ ಆಗಮನ ದೃಢಪಡಿಸಿದರು.
ಇದನ್ನೂ ಓದಿ:ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ಕಣ್ತುಂಬಿಕೊಂಡ ಸಹಸ್ರಾರು ಭಕ್ತರು
ಕೊಡವರ ಕುಲದೇವತೆ:ಕೊಡಗಿನ ಜನರ ಪಾಲಿಗೆ ಕಾವೇರಿ ಕೇವಲ ನದಿಯಲ್ಲ. ಆಕೆ ಕೊಡವರ ಕುಲದೇವತೆ. ಪಾಪನಾಶಿನಿ, ಬೇಡಿದ ವರ ನೀಡುವ ಕರುಣಾಮಯಿ. ಹಾಗಾಗಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥ ಸ್ವರೂಪಿಣಿಯಾಗಿ ಬರುವ ಪವಿತ್ರ ಕಾವೇರಿ ಮಾತೆಯ ಜಲವನ್ನು ಸಂಗ್ರಹಿಸಲು ಜನರು ಮುಂಜಾನೆಯಿಂದ ಕಾದು ಕುಳಿತಿದ್ದರು.
ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ:ವಿಶೇಷಾಗಿ ಕಾವೇರಿ ತನ್ನ ಸಹೋದರಿ ಗಂಗೆಯೊಂದಿಗೆ ಸೇರಿ ತುಲಾ ಸಂಕ್ರಮಣದ ಈ ಕಾಲದಲ್ಲಿ ತೀರ್ಥ ಸ್ವರೂಪಿಣಿಯಾಗಿ ಉಕ್ಕಿ ಬರುವುದರಿಂದ ಈ ಸಮಯದಲ್ಲಿ ತಲಕಾವೇೆರಿಯಲ್ಲಿ ಪುಣ್ಯಸ್ನಾನ ಮಾಡಿ ತೀರ್ಥ ಸಂಗ್ರಹ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ:ಕಾವೇರಿ 'ತೀರ್ಥೋದ್ಭವ' ವಿಸ್ಮಯಕ್ಕೆ ಮುಹೂರ್ತ ನಿಗದಿ
ಕೊಡಗು ಉಸ್ತುವಾರಿ ಸಚಿವ ಬಿ.ಸಿ ನಾಗೇಶ್, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಕಾವೇರಿ ತೀರ್ಥೋದ್ಭವದಲ್ಲಿ ಭಾಗವಹಿಸಿ ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಚಿವ ಬಿ.ಸಿ ನಾಗೇಶ್ ಕಾವೇರಿ ಮಾತೆ ಕೊಡಗು, ಕರ್ನಾಟಕಕ್ಕೆ ಅಷ್ಟೇ ಅಲ್ಲ. ನಮ್ಮ ಪಕ್ಕದ ಕೇರಳ ಹಾಗೂ ತಮಿಳುನಾಡಿಗೂ ನೀರು ಹರಿಸುತ್ತಾಳೆ. ಈ ಬಾರಿ ಹತ್ತಿರದಿಂದ ಕಾವೇರಿ ತೀರ್ಥೋದ್ಬವ ನೋಡಿ ಖುಷಿಯಾಗಿದೆ. ಕಳೆದ ಹಲವು ವರ್ಷಗಳ ಮಳೆಯಿಂದ ಸಾಕಷ್ಟು ಅನಾಹುತ ಅಗಿತ್ತು. ಆದರೆ ಈ ಬಾರಿ ಶಾಂತ ರೀತಿಯಲ್ಲಿ ಮಳೆ ಕಡಿಮೆ ಆಗಿರುವುದರಿಂದ ಕೊಡಗಿನಲ್ಲಿ ಯಾವುದೇ ಅನಾಹುತ ಇಲ್ಲದೆ ಮಳೆಗಾಲ ಕಳೆದಿದೆ. ಇನ್ನು ಮುಂದೆಯು ಇದೇ ರೀತಿಯಲ್ಲಿ ಶಾಂತ ರೀತಿಯಲ್ಲಿ ಇರಲ್ಲಿ ಎಂದು ಮಾತೆ ಕಾವೇರಿಯಲ್ಲಿ ಬೇಡಿಕೊಂಡಿದ್ದೇನೆ ಎಂದರು.
ಇದನ್ನೂ ಓದಿ:ನಾಳೆ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ: ಕೊಡಗು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ