ಮಡಿಕೇರಿ(ಕೊಡಗು):ಹುಟ್ಟೂರಿನಲ್ಲಿಯೇ ಕಾವೇರಿ ನದಿ ಮಲೀನಗೊಳ್ಳುತ್ತಿದ್ದು, ಅದರ ಸ್ವಚ್ಛತೆ ಹಾಗೂ ಉಳಿವಿಗಾಗಿ ಇದೀಗ ಅಭಿಯಾನ ಶುರುವಾಗಿದೆ. ಸಾಕಷ್ಟು ವರ್ಷದಿಂದ ಕಾವೇರಿ ಆರತಿಯ ಕೂಗು ಕೇಳಿ ಬರುತ್ತಿತ್ತು. ಕೊನೆಗೂ ಕಾವೇರಿ ಉಳಿಸುವ ಆ ಕೂಗಿಗೆ ಸರ್ಕಾರ ಧ್ವನಿಗೂಡಿಸಿದೆ.
ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಕಾವೇರಿ ಆರತಿ ಉತ್ಸವ ಅದ್ದೂರಿಯಾಗಿ ನಡೆಯಿತು. ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮ ವತಿಯಿಂದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಕಾವೇರಿ ನದಿ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಕಾವೇರಿ ನದಿ ಉಳಿವಿಗಾಗಿ 'ಕಾವೇರಿ ನದಿ ಸ್ವಚ್ಛತಾ ಆಂದೋಲನ' ಸಮಿತಿ ಹೋರಾಟ ಮಾಡುತ್ತಾ ಬಂದಿತ್ತು. ಸಾಕಷ್ಟು ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಇದೀಗ ಕಾವೇರಿ ಆರತಿ ನಡೆಸಿದೆ. ಜಲ ಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮದ ವತಿಯಿಂದ ಕಾವೇರಿ ನದಿಗೆ ಆರತಿ ಮಾಡಲಾಯಿತು.
ಕಾವೇರಿ ಸ್ವಚ್ಛತಾ ಅಭಿಯಾನ.. ತಲಕಾವೇರಿಯಲ್ಲಿ ಕಾವೇರಿಗೆ ಆರತಿ ಸ್ವಚ್ಛ ಕಾವೇರಿಯ ಉಳಿವಿಗಾಗಿ ಕಾವೇರಿ ಆರತಿ:ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿ ನಾಡಿನ ಉದ್ದಕ್ಕೂ ಹರಿದು ಕೋಟ್ಯಂತರ ಜನರಿಗೆ ಜೀವ ಜಲ ನೀಡಿ ಪೂಂಪ್ ಹಾರ್ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತಾಳೆ. ಆದರೆ, ಕಾವೇರಿ ತವರು ಜಿಲ್ಲೆಯಲ್ಲೇ ಮಲೀನವಾಗುತ್ತಿದ್ದು, ಅದು ತಪ್ಪಿ ಸ್ವಚ್ಛ ಕಾವೇರಿಯ ಉಳಿವಿಗಾಗಿ ಕಾವೇರಿ ಆರತಿ ಮಾಡಲಾಯಿತು.
ಉತ್ತರ ಭಾರತದಲ್ಲಿ ಗಂಗೆ ಎಷ್ಟು ಪಾವಿತ್ರ್ಯತೆಯನ್ನು ಪಡೆದಿದ್ದಾಳೋ, ಅದೇ ರೀತಿ ದಕ್ಷಿಣದಲ್ಲಿ ಕಾವೇರಿ ಅಷ್ಟೇ ಪಾವಿತ್ರತೆಯನ್ನ ಪಡೆದಿದೆ. ಹೀಗಾಗಿ ಉತ್ತರ ಭಾರತದಲ್ಲಿ ಹೇಗೆ ಗಂಗಾ ಆರತಿಯನ್ನ ಮಾಡಲಾಗುತ್ತದೋ, ಅದೇ ರೀತಿ ಕಾವೇರಿ ನದಿಯ ಉಳಿವಿಗಾಗಿ ಮೊದಲ ಹಂತವಾಗಿ ಕಾವೇರಿ ಆರತಿ ಮಾಡಲಾಯಿತು. ಮೊದಲಿಗೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ನಂತರ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಣೆ ಮಾಡಿ ಸಾಧು ಸಂತರು ಗಣ ಮಹಾ ಆರತಿ ಮಾಡಿದರು.
ಕಾವೇರಿ ಪ್ರಾಮುಖ್ಯತೆಯ ಅರಿವು:ತಲಕಾವೇರಿಯಿಂದ ಆರಂಭವಾದ ಕಾವೇರಿ ನದಿ ಸ್ವಚ್ಛತಾ ಆಭಿಯಾನ ಪೂಂಪ್ ಹಾರ್ ವರೆಗೆ ಸಾಗಿ ಮೂರು ರಾಜ್ಯಗಳಲ್ಲಿ ಜನರಿಗೆ ಕಾವೇರಿ ಪ್ರಾಮುಖ್ಯತೆಯ ಅರಿವು ಮೂಡಿಸಲಿದೆ. ಒಟ್ಟಿನಲ್ಲಿ ಕಾವೇರಿ ನದಿಯ ಉಳಿವಿಗಾಗಿ ಮೊದಲ ಹಂತದ ಸ್ವಚ್ಛತಾ ಆಂದೋಲನ ಆರಂಭವಾಗಿದ್ದು, ಸಂಘ ಸಂಸ್ಥೆಗಳೊಂದಿಗೆ ಸರ್ಕಾರವೂ ಕೈ ಜೋಡಿಸಿದೆ.
"ಕಾವೇರಿ ನದಿ ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ, ತಮಿಳುನಾಡು ಹಾಗೂ ಪಾಂಡಿಚೇರಿ ಮೂಲಕ ಸುಮಾರು 800 ಕಿ.ಮೀ.ಗೂ ಹೆಚ್ಚು ಹರಿಯುತ್ತದೆ. ಆ ನಿಟ್ಟಿನಲ್ಲಿ ಕಾವೇರಿ ನದಿಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಕಾವೇರಿ ನದಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ". ಉತ್ತರದಲ್ಲಿ ಗಂಗಾ ನದಿಯಂತೆ ದಕ್ಷಿಣದಲ್ಲಿ ಕಾವೇರಿ ನದಿಗೆ ಹೆಚ್ಚಿನ ಮಹತ್ವ ಇದೆ. ಕಾವೇರಿ ನದಿಯ ಪಾವಿತ್ರ್ಯತೆ ಎಲ್ಲರೂ ಕಾಪಾಡಬೇಕು. ಆ ನಿಟ್ಟಿನಲ್ಲಿ ಜನಾಂದೋಲನ ಆಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕಾವೇರಿ ನದಿ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಕಾವೇರಿ ನದಿ ಕೊಡಗು ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಹುಟ್ಟಿ ಇಡೀ ನಾಡಿಗೆ ಜೀವನದಿ ಆಗಿದೆ. ಆದ್ದರಿಂದ ಕಾವೇರಿ ನದಿಯ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಭಕ್ತಿಯಿಂದ ಜರುಗಿದ ಮಹಾ ಆರತಿ ಕಾರ್ಯಕ್ರಮ: ಕಾವೇರಿ ನದಿ ಉತ್ಸವ ಪ್ರಯುಕ್ತ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಕಾವೇರಿ ನದಿ ಸಂರಕ್ಷಣಾ ಅಭಿಯಾನದ ಸಂಯೋಜಕರಾದ ಭಾನು ಪ್ರಕಾಶ್ ಶರ್ಮಾ ಅವರು ವಿಶೇಷ ಪೂಜೆ ಸಲ್ಲಿಸಿದರು. ಮಹಾ ಅಭಿಷೇಕ, ಮಹಾ ಆರತಿ ವಿಶೇಷ ಪೂಜೆಯನ್ನು ಜೊತೆಗೆ ಬಾಗಿನವನ್ನು ತ್ರಿವೇಣಿ ಸಂಗಮದಲ್ಲಿ ಅರ್ಪಿಸಲಾಯಿತು.
ಇದನ್ನೂ ಓದಿ:ಕಾವೇರಿ ನದಿ ಉತ್ಸವ: ನಾಳೆ ಬೆಳಗ್ಗೆ 8.30ಕ್ಕೆ ಚಾಲನೆ, ನದಿ ಸಂರಕ್ಷಣೆ ಕುರಿತು ಜಾಗೃತಿ