ಕೊಡಗು:ಐದು ದಿನಗಳು ಸುರಿದ ರಣಭೀಕರ ಮಳೆಗೆ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದ ನಾರಾಯಣ ಆಚಾರ್ ಅವರ ಸಹೋದರ ಆನಂದತೀರ್ಥ ಅವರ ಮೃತದೇಹ ಮೂರು ದಿನಗಳ ಬಳಿಕ ಪತ್ತೆಯಾಗಿದೆ.
ಬ್ರಹ್ಮಗಿರಿ ಬೆಟ್ಟ ಕುಸಿತ.. ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ ಸಚಿವ ಸೋಮಣ್ಣ ಮತ್ತೊಂದೆಡೆ ಸಚಿವ ವಿ ಸೋಮಣ್ಣ ಪ್ರವಾಹದಲ್ಲಿ ಮುಳುಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದ್ದರು. ಕೊಡಗಿನ ಜೀವನದಿ, ಕೊಡಗಿನ ಕುಲದೇವತೆ ಕಾವೇರಿ ಸುರಿಯುತ್ತಿರುವ ಆಶ್ಲೇಷ ಮಳೆಗೆ ಉಗ್ರ ರೂಪ ತಾಳಿ ಉಕ್ಕಿ ಹರಿದಿದ್ದಾಳೆ. ಪರಿಣಾಮ ಜಿಲ್ಲೆಯ 40 ಕ್ಕೂ ಹೆಚ್ಚು ಹಳ್ಳಿಗಳನ್ನು ತನ್ನ ಪ್ರವಾಹದಲ್ಲಿ ಮುಳುಗಿಸಿ ಜನರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದಾಳೆ.
ಮೂರು ದಿನಗಳ ಹಿಂದೆ ಕುಸಿದ ಬ್ರಹ್ಮಗಿರಿ ಬೆಟ್ಟದ ಅಡಿಯಲ್ಲಿ ಕಣ್ಮರೆಯಾದ ಇದೇ ಕಾವೇರಿ ಮಾತೆಗೆ ನಿತ್ಯವೂ ಪೂಜೆ ಸಲ್ಲಿಸುತ್ತಿದ್ದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಕುಟುಂಬವನ್ನು ಬೆಟ್ಟದಡಿಗೆ ಸೇರುವಂತೆ ಮಾಡಿದೆ. ಮೂರು ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವೇ ಆಗಿರಲಿಲ್ಲ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆಗೆ ಇಂದು ಹೇಗಾದರೂ ಸರಿ ರಕ್ಷಣಾ ಕಾರ್ಯಚರಣೆ ಮಾಡಲೇಬೇಕು ಅಂತಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಷ್ಟರಲ್ಲೇ ಭೂಕುಸಿತದ ಸ್ಥಳದಲ್ಲಿ ಬೀಡು ಬಿಟ್ಟಿದ್ದ ಎನ್ಡಿಆರ್ಎಫ್ ತಂಡ ಮಳೆ ಕಡಿಮೆ ಆಗಿದೆ ಅಂತಾ ರಕ್ಷಣಾ ಕಾರ್ಯಚರಣೆ ಆರಂಭಿಸಿತ್ತು. ಮತ್ತೊಂದೆಡೆ ತಮ್ಮನ ಕುಟುಂಬವೇ ಭೂಕುಸಿತದಲ್ಲಿ ಕಣ್ಮರೆಯಾಗಿರುವ ಸುದ್ದಿ ತಿಳಿದು ಮಂಗಳೂರಿನಿಂದ ಬಂದಿದ್ದ ನಾರಾಯಣ ಆಚಾರ್ ಅವರ ಸಹೋದರಿ ಸುಶೀಲಾ, ತಮ್ಮ ಮತ್ತು ಆತನ ಕುಟುಂಬ ಬದುಕಿರುವುದಕ್ಕೆ ಯಾವುದೇ ನಂಬಿಕೆ ಇಲ್ಲ. ಕೊನೆ ಪಕ್ಷ ಅವರ ದೇಹಗಳನ್ನಾದರೂ ಹುಡುಕಿ ಕೊಡಿ ಅಂತ ಕಣ್ಣೀರು ಸುರಿಸಿ ಬೇಡಿಕೊಂಡರು.
ಇತ್ತ ಸಚಿವ ವಿ ಸೋಮಣ್ಣ ಪ್ರವಾಹದಲ್ಲಿ ಮುಳುಗಿದ್ದ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದರು. ಅಲ್ಲದೆ ಪರಿಹಾರ ಕೇಂದ್ರಗಳಲ್ಲಿ ಇರುವ ಕುಟುಂಬಗಳಿಗೆ ತಕ್ಷಣವೇ ತಲಾ ಹತ್ತು ಸಾವಿರ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರದ ಘೋಷಣೆ ಮಾಡಿದರು.
ಒಟ್ಟಿನಲ್ಲಿ ಕೊಡಗಿನ ಕುಲ ದೇವತೆಯೇ ಮುನಿದು ತನ್ನ ಸಾವಿರಾರು ಮಕ್ಕಳಿಗೆ ಸಂಕಷ್ಟ ತಂದಿದ್ದಾಳೆ ಕಾವೇರಿ. ಇನ್ನು ಪ್ರವಾಹದ ನೀರು ಹಲವೆಡೆ ನಿಂತಿದ್ದು, ಜನರ ಗೋಳು ಮಾತ್ರ ತಪ್ಪಿಲ್ಲ.