ಭಾಗಮಂಡಲ/ಕೊಡಗು : ಜಿಲ್ಲೆಯಲ್ಲಿ ರಣಭೀಕರ ಮಳೆ ಸುರಿಯುತ್ತಿರುವುದು ಕುಸಿದ ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ಮಣ್ಣಿನಡಿ ಕಣ್ಮರೆಯಾಗಿರುವ ಅರ್ಚಕರ ಕುಟುಂಬದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡೆತಡೆಯಾಗಿದೆ. ಹೇಗಾದರೂ ಸರಿ ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಉಸ್ತುವಾರಿ ಸಚಿವ ವಿ ಸೋಮಣ್ಣ ಭೇಟಿ ಮಾಡೋದಕ್ಕೂ ಹರಸಾಹಸ ಪಡವಂತಾಯ್ತು. ಆದ್ರೂ ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಪ್ರವಾಹ ಉಕ್ಕಿ ಹರಿಯುತ್ತಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಅಬ್ಬರಿಸುತ್ತಿರುವ ಆಶ್ಲೇಷ ಮಳೆಗೆ ಕೊಡಗು ಅಕ್ಷರಶಃ ನಲುಗಿದೆ. ನಿನ್ನೆ ಮುಂಜಾನೆ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತದಲ್ಲಿ ಕಣ್ಮರೆಯಾಗಿರುವ ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಕುಟುಂಬ ಸೇರಿ ಐದು ಜನರು ಕಣ್ಮರೆಯಾಗಿ ಎರಡು ದಿನ ಕಳೆಯುತ್ತಾ ಬಂದಿದೆ. ಆದರೆ, ಇಂದಿಗೂ ಅವರನ್ನು ಹುಡುಕಲು ಸಾಧ್ಯವಾಗಿಲ್ಲ. ಇಂದು ಹೇಗಾದರೂ ಮಾಡಿ ಅವರ ಕುಟುಂಬದ ರಕ್ಷಣೆಗೆ ಮುಂದಾಗಲೇಬೇಕು ಎಂದು ಕೊಡಗು ಉಸ್ತುವಾರಿ ಸಚಿವ ವಿ ಸೋಮಣ್ಣ ಮತ್ತು ಕೊಡಗಿನ ಶಾಸಕರು ಅಧಿಕಾರಿಗಳ ತಂಡ ಹರಸಾಹಸ ಪಟ್ಟರು.
ಎಲ್ಲೆಡೆ ಹರಿಯುತ್ತಿದ್ದ ಪ್ರವಾಹದ ನೀರನ್ನು ಜೀಪು, ಬೋಟ್ ಮೂಲಕ ಬಾಗಮಂಡಲ ತ್ರಿವೇಣಿ ಸಂಗಮ ದಾಟಿದ ಸಚಿವ ವಿ ಸೋಮಣ್ಣ ಕೊನೆಗೆ ಅವಘಡ ನಡೆದಿರುವ ಸ್ಥಳಕ್ಕೆ 4 ಕಿ.ಮೀ ನಡೆದುಕೊಂಡೇ ಸಾಗಿದ್ರು. ಆದರೂ ಭಯಾನಕ ಗಾಳಿ ಮಳೆಯಿಂದ ರಕ್ಷಣಾ ಕಾರ್ಯಾಚರಣೆ ಮಾಡಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಸಚಿವ ವಿ. ಸೋಮಣ್ಣ ಮಳೆ ನಿಲ್ಲದಿದ್ರೆ ರಕ್ಷಣಾ ಕಾರ್ಯಾಚರಣೆ ಕಷ್ಟ ಎಂದ್ರು.