ಕೊಡಗು:ವಾಣಿಜ್ಯ ಬೆಳೆ ಕರಿ ಮೆಣಸು ಮತ್ತು ಕಾಫಿ ನಂಬಿ ಜೀವನ ಕಟ್ಟಿಕೊಂಡ ಕೊಡಗು ಭಾಗದ ರೈತರು ಬೆಳೆಗೆ ರೋಗ ಬಂದು ನಷ್ಟವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಣಸಿಗೆ ರೋಗ ಬಂದು ನಷ್ಟವಾದರೆ ಹವಮಾನ ವೈಪರೀತ್ಯದಿಂದ ಕಾಫಿ ಫಸಲು ಉತ್ತಮ ಗುಣಮಟ್ಟ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿಲ್ಲ. ಬೆಳೆಗಾಗಿ ವ್ಯಯಿಸಿದ ಹಣವೂ ಸಿಗದೇ ಕೊಡಗು ಭಾಗದ ರೈತರು ಗೋಳಾಡುವ ಪರಿಸ್ಥಿತಿಗೆ ಬಂದಿದ್ದಾರೆ.
ಹೌದು, ಕೊಡಗು ಜಿಲ್ಲೆಯ ಕೆಲವು ಭಾಗದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಗೋಣಿಕೊಪ್ಪ ಪೊನ್ನಂಪೇಟೆ ಭಾಗದಲ್ಲಿ ಕಾಫಿ, ಮೆಣಸಿಗೆ ರೋಗ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಣಿಜ್ಯ ಬೆಳೆ ನಂಬಿ ಬದುಕು ಕಟ್ಟಿಕೊಂಡ ಕೊಡಗು ಭಾಗದ ರೈತರಿಗೆ ಈ ಬಾರಿ ಮೆಣಸು ಮತ್ತು ಕಾಫಿಯಿಂದ ಭಾರಿ ನಷ್ಟವಾಗಿದೆ.
5 ತಿಂಗಳು ಎಡೆಬಿಡದೇ ಸುರಿದ ಮಳೆಗೆ ಕಾಳು ಮೆಣಸಿನ ಗಿಡಗಳಿಗೆ ತಂಡಿ ಆಗಿ ರೋಗ ಹೆಚ್ಚಾಗಿದೆ. ಭೂಮಿ ಹೆಚ್ಚಾಗಿ ತಂಪಾಗಿದ್ದರಿಂದ ಮೆಣಸಿನ ಬಳ್ಳಿಯ ಎಲೆಗಳು ಹಳದಿ ರೂಪಕ್ಕೆ ತಿರುಗಿ ಉದುರಲು ಆರಂಭವಾಗಿವೆ. ಇನ್ನೇನು ಫಸಲು ಕೈ ಸೇರಬೇಕು ಎನ್ನುವಷ್ಟರಲ್ಲಿ ಸಂಪೂರ್ಣ ಬಳ್ಳಿಯೇ ಸತ್ತು ಮೆಣಸು ಉದಿರಿ ಹೋಗುತ್ತಿದೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.
ರವಿ ಎಂಬ ಬೆಳಗಾರರು ಹೇಳುವ ಪ್ರಕಾರ "ಪ್ರತಿ ವರ್ಷ ಎಕರೆಗೆ 2 ರಿಂದ 3 ಕ್ವಿಂಟಲ್ ಮೆಣಸು ಸಿಗುತ್ತಿತ್ತು. ಆದರೆ ಈ ಬಾರಿ 1 ಕ್ವಿಂಟಲ್ಗೂ ಕಡಿಮೆಯಾಗಿದೆ. ಗೊಬ್ಬರ ಮತ್ತು ರೋಗ ಬಾಧೆಯಿಂದ ತಪ್ಪಿಸಲು ಔಷಧಗಳಿಗೆ ಖರ್ಚು ಮಾಡಿದ ಹಣವೂ ಈ ಬಾರಿಯ ಫಸಲಿನಲ್ಲಿ ಸಿಕ್ಕಿಲ್ಲ. ಮೊದಲು ಬೆಳೆ ಇಲ್ಲದಿದ್ದರೂ ಗಿಡ ಚೆನ್ನಾಗಿತ್ತು. ಈ ಬಾರಿ ಬೆಳೆ ಜೊತೆಗೆ ಗಿಡಗಳು ಬೆಳೆವಣಿಗೆಯಾಗಿಲ್ಲ. ಮುಂದಿನ ವರ್ಷದ ಮೆಣಸಿಗೂ ಕೊರತೆ ಇದೆ. ದುರಂತ ಎಂದರೆ ಮೆಣಸಿಗೆ ಯಾವ ರೋಗ ಬಂದಿದೆ ಅಂತ ಪತ್ತೆಯಾಗುತ್ತಿಲ್ಲ. ಜಿಲ್ಲಾಡಳಿತ ಕೂಡ ಗಮನ ಹರಿಸುತ್ತಿಲ್ಲ" ಎಂದರು.