ಕೊಡಗು:ರಾಜ್ಯ ಪರಿಷತ್ ಚುನಾವಣೆಗೆ ಹೆಚ್.ವಿಶ್ವನಾಥ್ ಅವರಿಗೆ ಟಿಕೆಟ್ ನೀಡುವ ಸಂಬಂಧ ಮಾತನಾಡಿದ ನಾಗರಿಕ ಮತ್ತು ಆಹಾರ ಪೂರೈಕೆ ಖಾತೆ ಸಚಿವ ಕೆ.ಗೋಪಾಲಯ್ಯ, ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದೆ ಎಂದಿದ್ದಾರೆ.
ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದೆ: ಹಳ್ಳಿ ಹಕ್ಕಿ ಪರ ಸಚಿವ ಗೋಪಾಲಯ್ಯ ಬ್ಯಾಟಿಂಗ್
ಬಿಜೆಪಿ ಪಾಳಯದಲ್ಲಿ ವಿಧಾನ ಪರಿಷತ್ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಕಳೆದ ಚುನಾವಾಣೆಯಲ್ಲಿ ಸೋಲು ಕಂಡಿದ್ದ ಅಭ್ಯರ್ಥಿಗಳು ಪರಿಷತ್ ಟಿಕೆಟ್ಗಾಗಿ ಎದುರು ನೋಡುತ್ತಿದ್ದಾರೆ. ಇದೀಗ ಟಿಕೆಟ್ ಹಂಚಿಕೆ ಸಂಬಂಧ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯಿಸಿದ್ದು, ಬಿಜೆಪಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ಮಾಜಿ ಶಾಸಕ ಹೆಚ್.ವಿಶ್ವನಾಥ್ಗೆ ಟಿಕೆಟ್ ನೀಡುವ ಕುರಿತಂತೆ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇನ್ನು ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಇದೊಂದು ರಾಷ್ಟ್ರೀಯ ಪಕ್ಷ. ಕೇಂದ್ರದಿಂದ ಬರುವ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ರಾಜ್ಯ ಹಾಗೂ ಕೇಂದ್ರದಲ್ಲಿ ವರಿಷ್ಠ ಮಂಡಳಿ ಇದ್ದು, ಇವೆಲ್ಲವನ್ನೂ ದೊಡ್ಡವರು ನೋಡಿಕೊಳ್ಳುತ್ತಾರೆ. ಇದೀಗ ನನಗೆ ಕೊಟ್ಟಿರುವ ಖಾತೆಯನ್ನಷ್ಟೇ ನೋಡಿಕೊಳ್ಳುತ್ತೇನೆ ಎಂದರು.
ಆಹಾರ ಪೂರೈಕೆ ಹಾಗೂ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಿಗೂ ಭೇಟಿ ಕೊಡುತ್ತಿದ್ದೇನೆ. ಬಡವರಿಗೆ ಸರ್ಕಾರದಿಂದ ವಿತರಿಸುವ ಪಡಿತರದಲ್ಲಿ ಅನ್ಯಾಯ ಆಗಬಾರದು. ಈಗಾಗಲೇ ರಾಜ್ಯದಲ್ಲಿ ಅವ್ಯವಹಾರ ಹಾಗೂ ಕಾಳ ಸಂತೆಯಲ್ಲಿ ತೊಡಗಿದ್ದ 120 ನ್ಯಾಯಬೆಲೆ ಅಂಗಡಿಗಳಿಗೆ, 500 ಮಳಿಗೆಗಳಿಗೆ ನೋಟಿಸ್ ಮತ್ತು 50 ಪಡಿತರ ಮಳಿಗೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.