ಕೊಡಗು:ಜಿಲ್ಲೆಯ ಗೋಣಿಕೊಪ್ಪ ದಸರಾ ಪ್ರಯುಕ್ತ ದಸರಾ ಸಮಿತಿ ವತಿಯಿಂದ ಬೈಕ್ ರ್ಯಾಲಿ ನಡೆಸಲಾಯಿತು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಬೈಕ್ ಮತ್ತು ಕಾರ್ ರ್ಯಾಲಿ ನಡೆದಿದ್ದು, ನೋಡುಗರನ್ನು ಹೆಚ್ಚು ಆಕರ್ಷಿಸಿತು. ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ
ನೂರಾರು ಸ್ಪರ್ಧಿಗಳು ಉತ್ಸಾಹದಿಂದ ತಮ್ಮ ಬೈಕ್ ಗಳನ್ನು ಕ್ರೀಡಾಂಗಣದಲ್ಲಿ ಇಳಿಸಿದ್ರು.
ಕೊಡಗಿನಲ್ಲಿ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಮೈದಾನದಲ್ಲಿ ರಾಕೆಟ್ಗಳು ಹರಿದಾಡಿದ ರೀತಿಯಲ್ಲಿ ಸದ್ದು ಮಾಡುತ್ತ ಧೂಳ್ ಎಬ್ಬಿಸುತ್ತ ಶರವೇಗದಲ್ಲಿ ಬೈಕ್ಗಳನ್ನು ಓಡಿಸಲಾಯಿತು. ಸ್ಪರ್ಧಿಗಳು ಜೀವವನ್ನು ಲೆಕ್ಕಿಸದೇ ಶರವೇಗದಲ್ಲಿ ಗುರಿಯತ್ತ ಸಾಗೋ ದೃಶ್ಯ ರೋಮಾಂಚನಕಾರಿಯಾಗಿತ್ತು. ಒಬ್ಬರ ಬೆನ್ನಿಗೆ ಒಬ್ಬರು ವೇಗವಾಗಿ ಸಾಗುತ್ತಿದ್ದರೆ, ಯಾರು ಗೆಲ್ತಾರಪ್ಪಾ? ಎಂದು ವೀಕ್ಷಕರು ಕಾತರದಿಂದ ಎದುರು ನೋಡುತ್ತಿದ್ದರು.
ರೋಚಕ ಬೈಕ್ ಸ್ಫರ್ಧೆ: ದಸರಾ ಮಹೋತ್ಸವದ ನಿಮಿತ್ತ ನಡೆದ ಬೈಕ್ ರ್ಯಾಲಿಯಲ್ಲಿ ರಾಜ್ಯದ ವಿವಿದೆಡೆಗಳಿಂದ ಬಂದಿದ್ದ 60ಕ್ಕೂ ಹೆಚ್ಚು ರಾಲಿಪಟುಗಳು ಗೆಲುವಿಗಾಗಿ ನಡೆಸಿದ ಕಸರತ್ತು ನಿಜಕ್ಕೂ ಎದೆ ಝಲ್ಲೆನಿಸುವಂತಿತ್ತು. ರಾಲಿಗಾಗಿ ಸಿದ್ದಗೊಂಡಿದ್ದ ಟ್ರ್ಯಾಕ್ ನಲ್ಲಿ ಏಕ ಕಾಲದಲ್ಲಿ 12ರಿಂದ 15 ಸ್ಪರ್ಧಿಗಳ ನಡುವೆ ನಡೆದ ಸ್ಪರ್ಧೆ ರೋಚಕವಾಗಿತ್ತು.
ಯುವ ರ್ಯಾಲಿ ಪಟುಗಳಿಗೆ ಪ್ರೋತ್ಸಾಹ ನೀಡಲೆಂದು ಎಲ್ಲಾ ಸುರಕ್ಷಾ ಕ್ರಮಗಳೊಂದಿಗೆ ರಾಲಿ ಆಯೋಜನೆ ಮಾಡಲಾಗಿತ್ತು. ಮೈದಾನದಲ್ಲಿ ಬೈಕ್ ರೇಸ್ಗೆ ಪ್ರಾರಂಭದ ವಿಶಲ್ ಹೊಡೆಯುತ್ತಿದ್ದಂತೆ ನಾಮುಂದೆ ತಾಮುಂದೆ ಎಂಬಂತೆ ಶರವೇಗದಲ್ಲಿ ನುಗ್ಗೋ ಸ್ಪರ್ದಿಗಳು, ಬಾಗುತ್ತಾ ಬಳುಕುತ್ತಾ, ಮೈದಾನದಲ್ಲಿ ಧೂಳೆಬ್ಬಿಸುತ್ತಾ ಗುರಿಯತ್ತ ಸಾಗುತ್ತಾರೆ.
ಒಂದರೆಕ್ಷಣ ತಡಮಾಡಿದರೂ ಮತ್ತೊಬ್ಬ ಮುಂದೆ ಹೋಗಿ ಬಿಡ್ತಾರೆ. ಒಂಚೂರು ಎಡವಟ್ಟು ಮಾಡಿಕೊಂಡ್ರು ಉರುಳಿಸಿ ಬೀಳುವ ಸಾದ್ಯತೆ ಹೆಚ್ಚು. ಹೀಗಿರುವಾಗ ಅತ್ಯಂತ ಚಾಣಾಕ್ಷತೆಯಿಂದ ಲಯಬದ್ದವಾಗಿ ಬ್ಯಾಲೆನ್ಸ್ ಮಾಡುತ್ತಾ ಅಷ್ಟೇ ವೇಗವಾಗಿ ಗುರಿಯತ್ತ ಮುನ್ನುಗ್ಗಿ ಟಾರ್ಗೆಟ್ ರೀಚ್ ಆದ್ರೆ ಸ್ಪರ್ಧಿಗೆ ಗೆದ್ದ ಸಂಭ್ರಮ.