ಭಾಗಮಂಡಲ (ಕೊಡಗು): ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ನಲುಗಿ ಹೋಗಿದ್ದ ಕೊಡಗಿಗೆ ಮೂರನೇ ವರ್ಷವೂ ಆಘಾತ ಎದುರಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಭೀಕರ ಭೂಕುಸಿತವಾಗಿ ಐವರು ಕಣ್ಮರೆ ಆಗಿದ್ದಾರೆ.
ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಕಾವೇರಿ ಉಗಮಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟವೇ ಸಂಪೂರ್ಣ ನಾಮಾವಶೇಷವಾಗುವಂತೆ ಮಾಡಿದೆ. ಭಾಗಮಂಡಲ ತಲಕಾವೇರಿ ಸುತ್ತಮುತ್ತ 170 ಮಿಲಿ ಮೀಟರ್ ಮಳೆ ಸುರಿಯುತ್ತಿದ್ದಂತೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಇಂದು ಮುಂಜಾನೆ ಬೆಟ್ಟ ಕುಸಿದು ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಕುಟುಂಬದ ಐವರು ಕಣ್ಮರೆಯಾಗಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಎನ್ಡಿಆರ್ಎಫ್ ತಂಡ ಸ್ಥಳಕ್ಕೆ ದೌಡಾಯಿಸಲು ಪ್ರಯತ್ನಿಸಿತ್ತು. ಆದರೆ ಬಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ ಆಗಿದ್ದರಿಂದ ಆ ಪ್ರದೇಶವನ್ನು ದಾಟಿ ಹೋಗಬೇಕಾಗಿತ್ತು. ಅಷ್ಟೇ ಅಲ್ಲ, ಪ್ರತೀ ಅರ್ಧ ಕಿಲೋ ಮೀಟರ್ ದೂರದಲ್ಲೂ ಭೂಕುಸಿತ ಆಗಿದ್ದರಿಂದ ಯಾವುದೇ ವಾಹನಗಳಿಲ್ಲದೆ ಎನ್ಡಿಆರ್ಎಫ್ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ನಡೆದೇ ಹೋಗಬೇಕಾಯಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಎಸ್ಪಿ ಕ್ಷಮಾ ಮಿಶ್ರಾ ಕೂಡ ಬಾಗಮಂಡಲದಿಂದ ನಡೆದುಕೊಂಡೇ ಘಟನಾ ಸ್ಥಳ ತಲುಪಬೇಕಾಯಿತು. ವಿಪರ್ಯಾಸವೆಂದರೆ, ಮಳೆ ಆರ್ಭಟ ಮಾತ್ರ ಇನ್ನೂ ನಿಂತಿಲ್ಲ. ಜೊತೆಗೆ ಭಾರಿ ಪ್ರಮಾಣದಲ್ಲಿ ಮಂಜು ಸುತ್ತುವರೆದಿದ್ದು ರಕ್ಷಣಾ ಕಾರ್ಯಚರಣೆಗೆ ತೀವ್ರ ಅಡ್ಡಿ ಎದುರಾಗಿದೆ.