ಕರ್ನಾಟಕ

karnataka

'ಮನೆ ದುಡ್ಡಿನಲ್ಲಿ ಕಟ್ಟಿದ್ದು ಕೆಆರ್‌ಎಸ್‌ ಡ್ಯಾಂ ಮಾತ್ರ': ಎಚ್‌.ವಿಶ್ವನಾಥ್‌ಗೆ ಬಿ.ಸಿ.ನಾಗೇಶ್ ತಿರುಗೇಟು

By

Published : Mar 16, 2023, 8:54 AM IST

Updated : Mar 16, 2023, 9:18 AM IST

ಮಾರ್ಚ್​ 18ರಂದು ಸಿಎಂ ಬೊಮ್ಮಾಯಿ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಇದೇ ವೇಳೆ ಅವರು ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ಕೊಟ್ಟರು.

ಸಚಿವ ಬಿಸಿ ನಾಗೇಶ್
ಸಚಿವ ಬಿಸಿ ನಾಗೇಶ್

ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ನಾಗೇಶ್​ ತಿರುಗೇಟು

ಕೊಡಗು:ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ಮೋದಿ ಹಾಗೂ ಪ್ರತಾಪ್ ಸಿಂಹ ಅವರ ಅಪ್ಪನ ಮನೆಯಿಂದ ಹಣ ತಂದು ನಿರ್ಮಾಣ ಮಾಡಿಲ್ಲ ಎಂಬ ಬಿಜೆಪಿ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆಗೆ ಕೊಡಗು ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿರುಗೇಟು ನೀಡಿದ್ದಾರೆ. "ವಿಶ್ವನಾಥ್ ಹಿಂದಿನಿಂದಲೂ ಹಾಗೆಯೇ, ಅದೇ ರೀತಿ‌ ಹೇಳಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಬಗ್ಗೆ ಕಾಂಗ್ರೆಸ್ ಬಗ್ಗೆ ಕೂಡಾ ಇಲ್ಲಸಲ್ಲದ್ದನ್ನು ಅವರು ಮಾತನಾಡಿದ್ದರು. ಈಗ ನಮ್ಮ ಸರ್ಕಾರದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದೆಲ್ಲ ವಿಶ್ವನಾಥ್​ಗೆ ಹೊಸದಲ್ಲ. ಒಬ್ಬ ಒಳ್ಳೆಯ ರಾಜಕಾರಣಿ ಈ ರೀತಿ ಮಾತನಾಡಬಾರದಿತ್ತು‌" ಎಂದರು.

"ಯಾರು ಏನೇ ಕಾಮಾಗಾರಿ ಮಾಡಿದರೂ ಯಾರೂ ಕೂಡ ಅವರ ಅಪ್ಪನ ಮನೆಯಿಂದ ದುಡ್ಡು ತಂದು ಹಾಕೋದಿಲ್ಲ‌‌. ಇಂದಿರಾ ಗಾಂಧಿ ಕಾಲದಲ್ಲೂ ಮಾಡಿಲ್ಲ, ಮೋದಿ ಕಾಲದಲ್ಲೂ ಮಾಡಲ್ಲ. ಪ್ರಜಾಪ್ರಭುತ್ವದಲ್ಲಿ ಯಾರೂ ಕೂಡ ಅವರ ಮನೆಯಿಂದ ಹಣ ತಂದು ಹಾಕೋದಿಲ್ಲ. ಮನೆ ದುಡ್ಡು ಹಾಕಿ ನಿರ್ಮಾಣ ಮಾಡಿದ್ದು ಅಂತ ಇದ್ದರೆ ಅದು ಕೆಆರ್​ಎಸ್​ ಡ್ಯಾಮ್​ ಮಾತ್ರ. ಇದರ ಕೀರ್ತಿ ಮೈಸೂರು ಮಹರಾಜರಿಗೇ ಸಲ್ಲಬೇಕು‌. ಆದರೆ ದುರಾದೃಷ್ಟವೆಂದರೆ ಕಾಂಗ್ರೆಸ್ ಪಕ್ಷ ಶಾಲಾ ಪಠ್ಯಪುಸ್ತಕಗಳಲ್ಲಿ ಮಹಾರಾಜರ ಪಾಠ ತೆಗೆದು ಟಿಪ್ಪುವಿನ ಪಾಠ ಸೇರಿಸಿದ್ದಾರೆ" ಎಂದು ತಿರುಗೇಟು ಕೊಟ್ಟರು.

ವಿ.ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸುದ್ದಿಗಳಿಗೆ ಪ್ರತಿಕ್ರಿಯಿಸಿ, "ಚುನಾವಣೆ ಸಮಯದಲ್ಲಿ ಈ ರೀತಿಯ ವಿಚಾರಗಳು ಹೊಸದಲ್ಲ. ಸೋಮಣ್ಣ ಟಿಕೆಟ್ ಕೊಡದಿದ್ದರೂ ತಾವು ಬಿಜೆಪಿಯಲ್ಲಿ ಇರೋದಾಗಿ ಹೇಳಿದ್ದಾರೆ. ತಾವೂ ಎಲ್ಲೂ ಕೂಡ ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸೋಮಣ್ಣ ಕಾಂಗ್ರೆಸ್ ಸೇರ್ತಾರೆ ಎಂದು ನನ್ನ ಜೊತೆ ಈವರೆಗೂ ಪ್ರಸ್ತಾಪ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಸಹ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಸಮಯದಲ್ಲಿ ಇಂಥ ಬೆಳವಣಿಗೆಗಳು ಸಹಜ. ಯುಪಿಯಲ್ಲಿ ಬಿಜೆಪಿ ಸೋತೇಹೋಗುತ್ತೆ ಎಂದು ಹೇಳಲಾಗುತ್ತಿತ್ತು.
ಕೊನೆಗೆ ಬಿಜೆಪಿ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡೀತು" ಎಂದು ತಿಳಿಸಿದರು.

ಸಿಎಂ ಕೊಡಗು ಭೇಟಿ:ವಿವಿಧ ಯೋಜನೆಯ ಫಲಾನುಭವಿಗಳ ಸಮ್ಮೇಳನವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾರ್ಚ್ 18ರಂದು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಸಮ್ಮೇಳನದ ಯಶಸ್ಸಿಗೆ ಶ್ರಮಿಸುವಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ಸಚಿವ ನಾಗೇಶ್​ ಸೂಚಿಸಿದ್ದಾರೆ. ಈ ಸಮ್ಮೇಳನವು ಸರ್ಕಾರದ ಕಾರ್ಯಕ್ರಮವಾಗಿದ್ದು, ಫಲಾನುಭವಿಗಳ ಜೊತೆ ಮುಖ್ಯಮಂತ್ರಿ ಸಂವಾದ ನಡೆಸಲಿದ್ದಾರೆ. ಸಂವಾದ ಕಾರ್ಯಕ್ರಮ ನಂತರ ಗಾಂಧಿ ಭವನ, ಗ್ರೇಟರ್ ರಾಜಸೀಟು ಉದ್ಯಾನವನ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಸಿಎಂ ಬೊಮ್ಮಾಯಿ ನೆರವೇರಿಸಲಿದ್ದಾರೆ ಎಂದು ಹೇಳಿದರು. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜಿಲ್ಲಾಡಳಿತದ ಜೊತೆಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಬೇಕು. ಕಾರ್ಯಕ್ರಮದ ಯಶಸ್ಸಿಗೆ ಅಧಿಕಾರಿಗಳು ತೊಡಗಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.

ಇದನ್ನೂ ಓದಿ:ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್‌ನಿಂದ ಮಹಿಳೆಯರ ಕಿವಿಗೆ ಹೂವು: ಆರಗ ಜ್ಞಾನೇಂದ್ರ

Last Updated : Mar 16, 2023, 9:18 AM IST

ABOUT THE AUTHOR

...view details