ಕೊಡಗು:ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಆಸ್ತಿ ವಿಚಾರಕ್ಕೆ ಅಣ್ಣ ಸ್ವಂತ ತಮ್ಮನ ಪತ್ನಿಯನ್ನೇ ಬಡಿಗೆಯಿಂದ ಹೊಡೆದು ಸಾಯಿಸಿರುವ ಘಟನೆ ನಡೆದಿದೆ.
ಆಸ್ತಿ ಕಲಹ: ಮೈದುನನಿಂದ ಅತ್ತಿಗೆಯ ಕೊಲೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಗ್ರಾಮದ ಖಾಸಗಿ ಬಸ್ ಚಾಲಕ ರಂಜನ್ ಎಂಬಾತನ ಪತ್ನಿ ಯಶೋಧ (42) ಕೊಲೆಯಾದ ಮಹಿಳೆ. ಅತ್ತಿಗೆಯನ್ನೇ ಬರ್ಬರವಾಗಿ ಕೊಲೆಗೈದವನ ಹೆಸರು ಬಿಪಿನ್ ಕುಮಾರ್. ರಂಗಸಮುದ್ರದಲ್ಲಿ ಇದ್ದ ಆಸ್ತಿ ವಿಚಾರವಾಗಿ ಅಣ್ಣ-ತಮ್ಮನ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಆದ್ರೆ ಈ ಬಾರಿ ನಡೆದ ಜಗಳ ಕೊಲೆ ಮಾಡುವ ಹಂತಕ್ಕೆ ತಲುಪಿದೆ.
ಯಶೋಧ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ರಂಗಸಮುದ್ರದ ಮನೆಯಲ್ಲಿ ಆಸ್ತಿ ವಿಷಯಕ್ಕೆ ಅತ್ತೆ ಜೊತೆ ಯಶೋಧ ಜಗಳ ಮಾಡ್ತಿದ್ದರಂತೆ. ಇದೇ ವೇಳೆ ಬಂದ ಬಿಪಿನ್ ಜೊತೆಗೂ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಿಪಿನ್ ಕುಮಾರ್, ದೊಣ್ಣೆಯಿಂದ ಏಕಾಏಕಿ ಹಲ್ಲೆ ಮಾಡಿದ್ದಾನೆ. ಇದರಿಂದ ತ್ರೀವ್ರ ರಕ್ತಸ್ರಾವವಾಗಿ ಯಶೋಧ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಯಶೋಧ ಕುಸಿದು ಬಿದ್ದಿದ್ದನ್ನು ಕಂಡ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆದರೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.