ಕೊಡಗು : ಗಾಳಿಯ ವೇಗದಲ್ಲಿ ಹರಡುತ್ತಿರುವ ಕೊರೊನಾ ಮಹಾಮಾರಿಗೆ ಇನ್ನೂ ಲಸಿಕೆ ಸಿದ್ಧವಾಗಿಲ್ಲ. ಅದನ್ನು ನಿಯಂತ್ರಿಸಲು ಜನರು ಮೊದಲು ತೆಗೆದುಕೊಳ್ಳುತ್ತಿದ್ದಷ್ಟು ಎಚ್ಚರಿಕೆ ಈಗ ಇಲ್ಲ. ಹೀಗಾಗಿಯೇ ಇಲ್ಲೊಬ್ಬ ಆಟೋ ಚಾಲಕ ಪ್ರಯಾಣಿಕರಿಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಆಟೋ ಹಿಂದೆ ಮುಂದೆ ಪಾಪಿ ಕೊರೊನಾ ಅನ್ನೋ ಬೋರ್ಡ್, ಆಟೋ ಹತ್ತುವ ಮುನ್ನ ಕೈಗೆ ಸ್ಯಾನಿಟೈಸರ್, ಮುಖಕ್ಕೆ ಮಾಸ್ಕ್ ವಿತರಿಸೋ ಆಟೋ ಚಾಲಕ. ಅಂದ ಹಾಗೆ ಇವರು ಮಡಿಕೇರಿ ನಗರದ ನಿವಾಸಿ ಆಟೋ ಚಾಲಕ ಹನೀಫ್, ಹೀಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆಟೋಗೆ ಬರುವ ಪ್ರಯಾಣಿಕರಿಗೆ ನೀವೆಲ್ಲಿಗೆ ಹೋಗಬೇಕು ಎಂದು ಕೇಳುವ ಮುನ್ನ, ಹನೀಫ್ ಮಾಸ್ಕ್ ಎಲ್ಲಿ ಅಂತಾ ಕೇಳ್ತಾರೆ. ಮಾಸ್ಕ್ ಇಲ್ಲ ಅಂತ ಹೇಳಿದರೆ ಮೊದಲು ಎರಡು ತಿಳಿವಳಿಕೆಯ ಮಾತುಗಳನ್ನು ಹೇಳಿ, ನಂತರ ಕೈಗೆ ಸ್ಯಾನಿಟೈಸರ್ ಕೊಟ್ಟು, ಮಾಸ್ಕ್ ಕೊಡುತ್ತಾರೆ. ಬಳಿಕವಷ್ಟೇ ಆಟೋಗೆ ಹತ್ತಿಸಿಕೊಂಡು ಕರೆದೊಯ್ಯುತ್ತಾರೆ.
ಕೊರೊನಾ ಹರಡಲು ಆರಂಭವಾದ ಬಳಿಕ ದುಡಿಮೆ ತೀರಾ ಕಡಿಮೆ ಇದೆ. ಆದರೂ ನಮ್ಮ ಮತ್ತು ಪ್ರಯಾಣಿಕರ ದೃಷ್ಟಿಯಿಂದ ನನಗೆ ಸ್ವಲ್ಪ ಖರ್ಚಾದರೂ ಪರವಾಗಿಲ್ಲ ಅಂತ ನಿತ್ಯ 20 ರಿಂದ 25 ಪ್ರಯಾಣಿಕರಿಗೆ ಮಾಸ್ಕ್ ವಿತರಿಸುತ್ತಿದ್ದೇನೆ ಎನ್ನುತ್ತಾರೆ ಚಾಲಕ ಹನೀಫ್.