ಕೊಡಗು: ಪ್ರವಾಸಿಗರ ಆಕರ್ಷಣೆಯತಾಣವೆಂದೆ ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಇತ್ತೀಚೆನ ದಿನಗಳಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿಯ ರಾಜಾಸೀಟ್ ಉದ್ಯಾನದ ಸೆಕ್ಯೂರಿಟಿ ಗಾರ್ಡ್ ಮೇಲೆ ಸ್ಥಳೀಯ ವ್ಯಾಪಾರಸ್ಥರು ಹಲ್ಲೆ ಮಾಡಿರುವ ಘಟನೆ ಸೋಮವಾರ ಉದ್ಯಾನದ ಮುಂಭಾಗದಲ್ಲಿ ನಡೆದಿದೆ. ರಾಜಾಸೀಟ್ ಉದ್ಯಾನದ ಸೆಕ್ಯೂರಿಟಿ ಗಾರ್ಡ್ ಜಯಣ್ಣ ಎಂಬುವವರು ಮೇಲೆ ಕೋಲಿನಿಂದ ಹೊಡೆದು ಹಲ್ಲೆ ನಡೆಸಲಾಗಿದ್ದು, ಗಾಯಾಳು ಜಯಣ್ಣ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಸಂಜೆ ಸುಮಾರಿಗೆ ಜಯಣ್ಣ ಮತ್ತು ಉದ್ಯಾನ ಮುಂಭಾಗದಲ್ಲಿನ ವ್ಯಾಪಾರಸ್ಥ ಜಮ್ ಶೇದ್ ನಡುವೆ ಸಣ್ಣ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಇದರಿಂದ ಕೋಪಗೊಂಡ ಜಮ್ ಶದ್ ಏಕಾಏಕಿ ಜಯಣ್ಣರ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಜೊತೆಗೆ ಹಲ್ಲೆ ತಡೆಯಲು ಬಂದ ಜಯಣ್ಣ ಪತ್ನಿ ಸುಶೀಲಾ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ತೊಟಗಾರಿಕಾ ಅಧಿಕಾರಿಗಳು ಉದ್ಯಾನದ ಮಂಭಾಗದ ಗೇಟ್ ಬಂದ್ ಮಾಡಿದ್ದಾರೆ. ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೋಲಿನಿಂದ ಹಲ್ಲೆ ಮಾಡುತ್ತಿರುವುದನ್ನು ಕಂಡ ಕೆಲ ಪ್ರವಾಸಿಗರು ಗಾಬರಿಗೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ. ಈ ರೀತಿಯ ಘಟನೆಗಳು ಪ್ರವಾಸಿ ತಾಣಗಳಿಗೆ ಕಪ್ಪು ಚುಕ್ಕಿಯಾಗಲಿವೆ. ಅಲ್ಲದೇ ಇಂತಹ ಘಟನೆಗಳಿಗೆ ಮರುಕಳಿಸದಂತೆ ಕಡಿವಾಣ ಹಾಕಿ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಪ್ರವಾಸಿಗರು ಆಗ್ರಹಿಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.