ಕೊಡಗು: ಕೈಯಲ್ಲಿ ಬಂದೂಕು, ಚಾಕು, ತ್ರಿಶೂಲ ಹಿಡಿದು ವಿದ್ಯಾರ್ಥಿಗಳು ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ್ ಎಜುಕೇಶನಲ್ ಸಂಸ್ಥೆಯಲ್ಲಿ ಇದೇ ತಿಂಗಳ 5 ರಿಂದ 13ರ ವರೆಗೆ ಸಂಘ ಪರಿವಾರ ಶೌರ್ಯ ಪ್ರಶಿಕ್ಷಣ ವರ್ಗ 2022 ಹೆಸರಿನಲ್ಲಿ ಹಿಂದುತ್ವ ಕಾರ್ಯಕರ್ತರಿಗೆ ಈ ತರಬೇತಿ ನೀಡಿದೆ.
ಈ ತರಬೇತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧರ್ಮ ಉಳಿಸಿಕೊಳ್ಳಲು ಶಸ್ತ್ರಾಸ್ತ್ರ ತರಬೇತಿ ಅಗತ್ಯ ಎಂದು ಬಜರಂಗದಳ ಸಮರ್ಥನೆ ಮಾಡಿಕೊಂಡ್ರೆ ಇತ್ತ ಎಸ್ಡಿಪಿಐ ಕಾರ್ಯಕರ್ತರು ಮಾತ್ರ ಈ ತರಬೇತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಗಳನ್ನು ಒಗ್ಗೂಡಿಸಿದರೆ ಧರ್ಮ ಅದಾಗಿಯೇ ಉಳಿಯುತ್ತೆ. ಅದು ಬಿಟ್ಟು ಕೈಗೆ ಚಾಕು ಕೊಟ್ರೆ ಮಕ್ಕಳ ಭವಿಷ್ಯವೇನು?. ಭಾಷಣ ಮಾಡಿ ಮಕ್ಕಳ ಮನಸ್ಸು ಹಾಳು ಮಾಡ್ತಾರೆ. ಇದೇ ಮಕ್ಕಳು ಭಾಷಣ ಕೇಳಿ ಅನ್ಯಧರ್ಮದವರಿಗೆ ಚಾಕು ಹಾಕ್ತಾರೆ. ವೈಯಕ್ತಿಕ ದ್ವೇಷನೂ ಹುಟ್ಟುತ್ತೆ. ಎರಡು ಧರ್ಮಗಳ ನಡುವೆ ಸಂಘರ್ಷನೂ ಆಗುತ್ತೆ. ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತೋಕೆ ಹೇಳಿಕೊಡೋದು ಸರಿನಾ? ಬಜರಂಗದಳದಿಂದ ಇದೆಂಥ ಹಿಂಸಾತ್ಮಕ ಟ್ರೈನಿಂಗ್ ? ಧರ್ಮ ಉಳಿಸೋದು ಅಂದ್ರೆ ಚುಚ್ಚೋದಾ, ಶೂಟ್ ಮಾಡೋದಾ? ಎಂದು ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಬಶೀರ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.