ಕೊಡಗು : ವಿದ್ಯುತ್ ಬಿಲ್ ಜಾಸ್ತಿ ಕೊಟ್ಟಿದ್ದಾರೆ ಎಂದು ಜಗಳ ತೆಗೆದು ಬಿಲ್ ಕಲೆಕ್ಟರ್ಗೆ ಚಾಕು ಇರಿದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ನಡೆದಿದೆ. ಪ್ರಶಾಂತ್ ಚಾಕು ಇರಿತಕ್ಕೆ ಒಳಗಾದ ವಿದ್ಯುತ್ ಬಿಲ್ ಕಲೆಕ್ಟರ್ ಆಗಿದ್ದಾರೆ. ಜಂಬೂರು ಪುನರ್ವಸತಿ ಬಡಾವಣೆಯ ರತೀಶ್ ಎಂಬಾತ ಕೃತ್ಯ ಎಸಗಿದ್ದಾನೆ. ಘಟನೆಯಲ್ಲಿ ಪ್ರಶಾಂತ್ ಅವರ ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಕುರಿತು ಮಾದಾಪುರ ಹೊರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಬಾಕಿ ಕರೆಂಟ್ ಬಿಲ್ ಕಟ್ಟು ಎಂದಿದ್ದಕ್ಕೆ ಹಲ್ಲೆ:ಮೇ 31 ರಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಬಾಕಿ ಕರೆಂಟ್ ಬಿಲ್ ಕಟ್ಟು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಜೆಸ್ಕಾಂನ ಜೆಇ ಮತ್ತು ಲೈನ್ಮೆನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಆಳಂದ ಪಟ್ಟಣದ ಸೋನಾರ್ ಕಾಲೋನಿಯ ನಿವಾಸಿ ವಸೀಂ ಕಳೆದ ಆರು ತಿಂಗಳಿಂದ ತನ್ನ ಮನೆಯ ಮತ್ತು ತನ್ನ ಢಾಬಾದ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ. ಇದನ್ನು ಕಟ್ಟಿಸಿಕೊಳ್ಳಲು ಜೆಇ ಸಿದ್ರಾಮಪ್ಪ ಮತ್ತು ಲೈನ್ ಮೆನ್ ಇಜಾಜ್ ವಸೀಂ ಮನೆಗೆ ತೆರಳಿ ಬಾಕಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಹೇಳಿದ್ದರು.
ಆದರೆ, ವಿದ್ಯುತ್ ಶುಲ್ಕವನ್ನು ಕಟ್ಟುವುದಿಲ್ಲ ಎಂದು ಜೆಸ್ಕಾಂ ಸಿಬ್ಬಂದಿ ಜೊತೆ ವಸೀಂ ವಾದ ಮಾಡಿದ್ದನು. ಈ ಸಂದರ್ಭದಲ್ಲಿ ಬಾಕಿ ಕರೆಂಟ್ ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡಲು ಮುಂದಾದಾಗ, ವಸೀಂ ಜೆಇ ಸಿದ್ರಾಮಪ್ಪ ಮತ್ತು ಜೆಇ ಇಜಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು, ಮತ್ತು ಕಬ್ಬಿಣದ ರಾಡ್ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದನು. ಘಟನೆಯಲ್ಲಿ ಜೆಇ ಸಿದ್ರಾಮಪ್ಪಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.