ಮಡಿಕೇರಿ (ಕೊಡಗು) :ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪುರಾತನ ಚಿನ್ನಾಭರಣ ಮತ್ತು ನಿಧಿ ಸಿಕ್ಕಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರದ ಅಮ್ಮತಿ ಸಮೀಪದ ಮುಖ್ಯ ರಸ್ತೆಯಲ್ಲಿರುವ ಆನಂದಪುರ ಗ್ರಾಮದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ನಡೆದಿದೆ. ಕಾಫಿ ತೋಟದ ನಡುವೆ ಇರುವ ದೇವಾಲಯದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುವ ವೇಳೆ ಪುರಾತನ ಚಿನ್ನಾಭರಣ ಮತ್ತು ನಿಧಿ ದೊರೆತಿದ್ದು, ನಿಯಮಾನುಸಾರ ಸರ್ಕಾರಕ್ಕೆ ಒಪ್ಪಿಸಲಾಗಿದೆ.
ತೋಟದಲ್ಲಿ ಪುರಾತನ ಕಾಲದ ಈಶ್ವರ ದೇವಸ್ಥಾನದ ಬಳಿ ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭ ಭೂಮಿಯ ಅಡಿಯಲ್ಲಿ ಪ್ರಾಚಿನ ಕಾಲದ ಕೆಲ ವಸ್ತುಗಳು ಪತ್ತೆಯಾಗಿವೆ. ಅದರೊಳಗೆ ಚಿನ್ನದ ಆಭರಣಗಳು, ಹಳೆಯ ಕಾಲದ ಉಂಗುರ, ಖಡ್ಗ ಸೇರಿದಂತೆ ಪ್ರಾಚೀನ ಕಾಲದ ಆಭರಣಗಳು ಪತ್ತೆಯಾಗಿವೆ.