ಮಡಿಕೇರಿ (ಕೊಡಗು):ಅಪೌಷ್ಠಿಕತೆ ಹೋಗಲಾಡಿಸಲು ಅಂಗನವಾಡಿ ಕಡೆಯಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸುವ ಮೊಟ್ಟೆಗಳಲ್ಲಿ ಕೆಲವು ಕೊಳೆತಿರುವ ಆರೋಪ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಕೊಳೆತ ಮತ್ತು ವಾಸನೆ ಭರಿತ ಕೋಳಿ ಮೊಟ್ಟೆಗಳನ್ನು ವಿತರಿಸಿದ್ದಾರೆ ಕೂಡಿಗೆ ಭಾಗದ ಹಲವು ಫಲಾನುಭವಿ ಮಹಿಳೆಯೊಬ್ಬರು ದೂರಿದ್ದಾರೆ.
ಕೂಡಿಗೆ ಬಳಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ಕೂಡಿಗೆಯ ಬಾಣಂತಿ ಗೀತಾ ಎಂಬವರಿಗೆ ನೀಡಿದ್ದ ಮೊಟ್ಟೆಗಳನ್ನು ಬೇಯಿಸಿ ನೋಡಿದಾಗ ಅವುಗಳು ಕಪ್ಪು ಬಣ್ಣಕ್ಕೆ ತಿರುಗಿ ವಾಸನೆಯುಕ್ತವಾಗಿದ್ದವು ಎಂದು ಆರೋಪಿಸಿದ್ದಾರೆ. ಒಂದು ವೇಳೆ ಈ ಕೊಳೆತ ಸ್ಥಿತಿಯಲ್ಲಿನ ಕಳಪೆ ಮೊಟ್ಟೆಗಳನ್ನು ತಿಂದಿದ್ದಲ್ಲಿ ಬಾಣಂತಿಯರು ಹಾಗೂ ಶಿಶುಗಳ ಆರೋಗ್ಯದ ಸ್ಥಿತಿ ಯಾವ ದುಸ್ಥಿತಿಗೆ ತಲುಪುತ್ತಿತ್ತೋ ಏನೋ? ಎಂದು ಇಲ್ಲಿನ ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು: ಮಹಿಳೆಯರು ಹಾಗೂ ಎಳೆಯ ಹಸುಳೆಗಳ ಆರೋಗ್ಯದ ಹಿತದೃಷ್ಟಿಯಿಂದ ನೀಡುತ್ತಿರುವ ಪೌಷ್ಠಿಕ ಆಹಾರವಾದ ಉತ್ತಮ ಗುಣಮಟ್ಟದ ಮೊಟ್ಟೆಯನ್ನು ನೀಡುವಲ್ಲಿ ಬೇಜವಾಬ್ದಾರಿ ತೋರಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ನೊಂದ ಮಹಿಳೆಯರು ಒತ್ತಾಯಿಸಿದ್ದಾರೆ.
ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರ ಸೂಚನೆ:ಕೊಳೆತ ಮೊಟ್ಟೆ ವಿತರಣೆ ಮಾಡಿರುವ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜು ಅವರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಕೊಳೆತ ಮೊಟ್ಟೆ ಸರಬರಾಜು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.