ಕೊಡಗು: ಕೊರೊನಾ ಹರಡದಂತೆ ದೇಶದಲ್ಲಿ ಮಾರ್ಚ್ 20 ರಿಂದ ಲಾಕ್‍ಡೌನ್ ಜಾರಿಗೊಳಿಸಲಾಯಿತು. ಬಳಿಕ ಕೊಡಗಿನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. 2020 ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 49 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಟ್ಟು ಪ್ರಕರಣಗಳ ಪೈಕಿ 36 ಪ್ರಕರಣಗಳು ಲಾಕ್ ಡೌನ್ ಆದ ಬಳಿಕವೇ ನಡೆದಿವೆ ಅನ್ನೋದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಿಳಿದು ಬಂದಿರುವ ಮಾಹಿತಿ. ಕಳೆದ ವರ್ಷ 33 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ 9 ತಿಂಗಳಲ್ಲೇ ಬರೋಬ್ಬರಿ 37 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮೂವರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು, ಒಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿದೆ.
ಕೊಡಗಿನಲ್ಲಿ ಲಾಕ್‍ಡೌನ್ ಬಳಿಕ ಹೆಚ್ಚುತ್ತಿರುವ ಬಾಲ್ಯವಿವಾಹ, ದೌರ್ಜನ್ಯ ಪ್ರಕರಣಗಳು ಈ ಕುರಿತು ಬಾಲ ನ್ಯಾಯ ಮಂಡಳಿ ಸಮಿತಿಯನ್ನು ವಿಚಾರಿಸಿದರೆ, ಕೊಡಗಿನಲ್ಲಿ ಇದುವರೆಗೆ ದಾಖಲಾಗಿರುವ ಪೋಕ್ಸೋ ಕಾಯ್ದೆಗಳು ಪ್ರತಿ ವರ್ಷದಂತೆ ಇವೆ. ಆದರೆ ಕಳೆದ ವರ್ಷ ದಾಖಲಾಗಿದ್ದ ಪ್ರಕರಣಗಳಿಗಿಂತ ಮೂರು ಹೆಚ್ಚುವರಿ ಪ್ರಕರಣಗಳು ಕಂಡುಬಂದಿವೆ. ಎರಡು ಬಾಲ್ಯ ವಿವಾಹ ಕೇಸುಗಳು ದಾಖಲಾಗಿವೆ. ಪೋಕ್ಸೋ ಪ್ರಕರಣಗಳೆಲ್ಲವೂ ಆದಿವಾಸಿ ಸಮುದಾಯಗಳಲ್ಲೇ ನಡೆದಿವೆ. ಅವು ಕೂಡ ಅವರ ಜೀವನ ಪದ್ಧತಿಯ ಭಾಗವಾಗಿವೆ ಎನ್ನುತ್ತಾರೆ.
ಈ ಪ್ರಕರಣಗಳು ದಾಖಲಾಗಲು ಮುಖ್ಯವಾಗಿ ಅವರಿಗೆ ಅರಿವಿನ ಕೊರತೆ ಇದೆ. ಹಿಂದೆ ಸಾಕಷ್ಟು ಅರಿವು ಮೂಡಿಸಲಾಗುತ್ತಿತ್ತು. ಮಹಿಳಾ ಠಾಣೆಯಿಂದ ಎರಡು ತಿಂಗಳಲ್ಲೇ 75 ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು. ಆದರೆ ಲಾಕ್ ಡೌನ್ ಆದ ಬಳಿಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹೀಗಾಗಿ ಈ ಪ್ರಕರಣಗಳು ಹೆಚ್ಚುತ್ತಿವೆ ಅನ್ನೋದು ಬಾಲ ನ್ಯಾಯ ಮಂಡಳಿಯ ಅಭಿಪ್ರಾಯ.