ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಯಡವನಾಡು ಅರಣ್ಯದಲ್ಲಿ ಮರಗಳನ್ನು ಅಕ್ರಮವಾಗಿ ಸಾಗಿಸುವ ಕೆಲಸದಲ್ಲಿ ಅರಣ್ಯ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಕುಶಾಲನಗರ ಅರಣ್ಯ ಸಂಪತ್ತು ಉಳಿಸುವ ಕೆಲಸ ಮಾಡಲಿ ಎಂದು ಸಿಬ್ಬಂದಿಯನ್ನು ನೇಮಿಸಿದರೆ ಅವರೇ ಮರಗಳನ್ನು ಅಕ್ರಮವಾಗಿ ಸಾಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಯಡವನಾಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ಮರಗಳನ್ನು ರಾತ್ರಿ ಸಮಯದಲ್ಲಿ ತೆಗೆದು ಸಿಬ್ಬಂದಿ ಸಾಗಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ 250ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಿಸಿರುವ ಪ್ರಕರಣ ಕಂಡು ಬಂದಿದ್ದು, ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು. ಇದೀಗ ಎಡನಾಡು ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಪ್ರಸಾದ್, ಪಾಪು ಎಂಬುವವರು ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿರುವವರ ಜೊತೆಗೂಡಿ ಅಕ್ರಮ ಮರ ಸಾಗಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಹಾಗಾಗಿ ಮೇಲಾಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಂಡು ಅವರನ್ನು ಬೇರೆ ಕಡೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಅಕ್ರಮ ಬಂದೂಕು ತಯಾರಿಸಿ ಮಾರಾಟ: ಸುಳ್ಯದಲ್ಲಿ ನಾಲ್ವರ ಬಂಧನ
ಈ ಸಂದರ್ಭ ಮಾತನಾಡಿದ ಸ್ಥಳೀಯ ನಿವಾಸಿ ದೊರೆ, ಪ್ರಸಾದ್ ಮತ್ತು ಪಾಪು ಎಂಬ ಸಿಬ್ಬಂದಿ ಯಡವನಾಡು ಅರಣ್ಯದಲ್ಲಿರುವ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸುವವರ ಜೊತೆ ಸೇರಿ ಮರ ಸಾಗಿಸುತ್ತಿದ್ದಾರೆ. ಇದರ ಬಗ್ಗೆ ಅರಣ್ಯ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಆರಣ್ಯ ಸಂಪತ್ತನ್ನು ಉಳಿಸಲು ಪ್ರಯತ್ನ ಪಡುತ್ತಿದ್ದೇನೆ. ಆದ್ರೆ ನನ್ನ ಮೇಲೆ ಆರಣ್ಯ ಸಿಬ್ಬಂದಿ ಜಿದ್ದಿಗೆ ಬಿದ್ದು ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.