ವಿರಾಜಪೇಟೆ: ಯಾವುದೋ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಿನ ಜಾವ ವಿರಾಜಪೇಟೆ ಬಳಿಯ ಪೆರುಂಬಾಡಿ ಎಂಬಲ್ಲಿ ಕೆಲವರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ರಸ್ತೆ ಬದಿ ನಿಂತಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಎಚ್ಚೆತ್ತ ಪೊಲೀಸರು, ವಿರಾಜಪೇಟೆ ನಗರ ಠಾಣೆಯ ಪಿಎಸ್‍ಐ ಹೆಚ್.ಎಸ್.ಭೋಜಪ್ಪ ತಮ್ಮ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರಿನ ವೃಂದಾವನ ಬಡಾವಣೆಯ ವಾದಿರಾಜ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿಯ ವಿ. ನಾರಾಯಣಸ್ವಾಮಿ, ಬೆಂಗಳೂರಿನ ಹೆಣ್ಣೂರು ರಸ್ತೆ ನಿವಾಶಿ ಜಾನ್ ಪೌಲ್, ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿ ಜ್ಞಾನೇಂದ್ರ ಪ್ರಸಾದ್, ಕೇರಳದ ಚರಕಲ್ ನಿವಾಸಿ ಕೆ.ವಿ.ಅಭಿನವ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಬ್ಬೆಹಳ್ಳಿ ನಿವಾಸಿ ಸತೀಶ್, ತಮಿಳುನಾಡಿನ ಹೊಸೂರು ನಿವಾಸಿ ಸುರೇಶ್, ಕೇರಳದ ಕೋಯಿಕ್ಕೋಡ್ ಜಿಲ್ಲೆಯ ವಡಗರ ನಿವಾಸಿ ವೈಷ್ಣವ್ ಮತ್ತು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿ ಪುರುಷೋತ್ತಮ ಎಂಬವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಲೆಂದು ಇರಿಸಿದ್ದ ಮೂರು ಕಬ್ಬಿಣದ ರಾಡು, ಚಾಕುಗಳು ಮತ್ತು ಮಚ್ಚು, ಎರಡು ತಲ್ವಾರ್,ಖಾರದ ಪುಡಿ, ಸುಮಾರು ಎಂಟು ಕೆ.ಜಿ. ಯಷ್ಟು ಪಾದರಸ ಹಾಗೂ ಎರಡು ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಬೋಜಪ್ಪರವರೊಂದಿಗೆ ಎನ್.ಸಿ. ಲೋಕೇಶ್, ಮುಸ್ತಫಾ, ಸಂತೋಷ್, ಗಿರೀಶ್, ಮಧು, ಮುನೀರ್, ರಜನ್, ಲೋಹಿತ್, ಮಲ್ಲಿಕಾರ್ಜುನ, ಚಾಲಕ ಯೋಗೇಶ್ ಭಾಗವಹಿಸಿದ್ದರು.