ಕೊಡಗು :ಕಾರು ಹಾಗೂ ರಾಜ್ಯ ಸಾರಿಗೆ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆಯ ಪೆಟ್ರೋಲ್ ಬಂಕ್ ಬಳಿ ಇಂದು (ಶುಕ್ರವಾರ) ಮಧ್ಯಾಹ್ನ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಮಂಗಳೂರಿನಿಂದ ಮಡಿಕೇರಿಯತ್ತ ಬರುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇದ್ದವರೆಲ್ಲ ಮೂಲತಃ ಮಂಡ್ಯ ಜಿಲ್ಲೆಯವರು ಎಂದು ತಿಳಿದುಬಂದಿದೆ. ಮಳವಳ್ಳಿ ತಾಲೂಕಿನವರಾದ ಕುಮಾರ (35), ಶೀಲಾ (29), ಪ್ರಿಯಾಂಕ (42), ಮಕ್ಕಳಾದ ಮನಸ್ವಿ (8), ಯಶಸ್ ಗೌಡ (12), ಮಿಷಿಕಾ (ಒಂದೂವರೆ ವರ್ಷ) ಮೃತಪಟ್ಟವರು. ಗಂಭೀರ ಗಾಯಗೊಂಡ ಮಂಜುನಾಥ ಎಂಬುವರು ಮಂಗಳೂರು ಆಸ್ಪತ್ರೆ ಹಾಗೂ ಬಿಯಾನ್ ಗೌಡ ಎಂಬುವರನ್ನು ಚಿಕಿತ್ಸೆಗೆ ಕೆವಿಜಿ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.