ಮಡಿಕೇರಿ (ಕೊಡಗು):ಹಚ್ಚಹಸಿರಿನ ಕಾಫಿತೋಟ, ಸುರಿಯುತ್ತಿರುವ ತುಂತುರು ಮಳೆ ಹನಿ, ಬೋರ್ಗೆರೆದು ಹರಿಯುತ್ತಿರುವ ಜಲಪಾತ, ಇದು ಕೊಡಗಿನ ಮುಂಗಾರಿಗೆ ದುಮ್ಮಿಕ್ಕುತ್ತಿರುವ ಅಬ್ಬಿ ಜಲಪಾತದ ವೈಭವ. ಈ ವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ನೆರೆದಿದೆ.
ಮಡಿಕೇರಿಯ ಮನಮೋಹಕ ಅಬ್ಬಿ ಜಲಪಾತ ಬೋರ್ಗರೆಯುತ್ತಿದೆ. ಹಾಲ್ನೋರೆಯಂತೆ ದುಮ್ಮಿಕ್ಕುತ್ತಿರುವ ಜಲಪಾತವು ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ. ಈ ಜಲಧಾರೆಯ ಸೊಬಗನ್ನು ನೋಡುವುದೇ ಈಗ ಕಣ್ಣಿಗೆ ಹಬ್ಬವಾಗಿದ್ದು, ಸಾವಿರಾರು ಪ್ರವಾಸಿಗರು ಈ ಜಲಪಾತವನ್ನು ನೋಡಲು ಮುಗಿಬೀಳುತ್ತಿದ್ದಾರೆ.
ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಅಬ್ಬಿ ಫಾಲ್ಸ್ ವೈಭವ ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ಅಬ್ಬಿ ಜಲಪಾತದ ಸೌಂದರ್ಯ ಇಮ್ಮಡಿಗೊಳಿಸಿದೆ. ಕೊಡಗಿನ ಜಲಪಾತ ಸವಿಯಲು ಮಳೆಗಾಲವೇ ಪ್ರಸಕ್ತ ಸಮಯವಾಗಿದ್ದು, ಜಿಟಿ ಜಿಟಿ ಮಳೆಯಲ್ಲಿ ಮನಸಿಗೆ ಮುದನೀಡುವ ಪರಿಸರ ಪ್ರವಾಸಿಗರನ್ನ ಮಂತ್ರ ಮುಗ್ದಗೊಳಿಸುತ್ತೆ.
ಅಬ್ಬಿ ಜಲಪಾತದ ವಿಶೇಷವೆಂದರೆ ವಾಹನದಿಂದ ಇಳಿದು ಸುಮಾರು ಅರ್ಧ ಕಿ.ಮೀಟರ್ ದೂರ ನಡೆದುಕೊಂಡು ಸಾಗಬೇಕು. ಇದು ಪ್ರವಾಸಿಗರಿಗೆ ಮತ್ತಷ್ಟು ಮಜಾ ನೀಡುತ್ತದೆ. ದೊಡ್ಡವರಿಂದ ಹಿಡಿದು ಪುಟ್ಟ ಪುಟ್ಟ ಮಕ್ಕಳವರೆಗೂ ಆಗಮಿಸಿ ಜಲಪಾತದ ಸೌಂದರ್ಯವನ್ನು ನೋಡಿ ಸಂತಸ ಪಡುತ್ತಾರೆ.
ಕೊರೊನಾ ಲಾಕ್ಡೌನ್ನಿಂದ ಮನೆಯಲ್ಲೆ ಕಾಲ ಕಳೆದಿದ್ದ ಜನರು ಇದೀಗ ಪ್ರವಾಸಿ ತಾಣಗಳತ್ತ ಮುಖಮಾಡಿದ್ದಾರೆ. ಮಡಿಕೇರಿಯಿಂದ ಸುಮಾರು 8 ಕೀ.ಮೀ ದೂರದಲ್ಲಿರುವ ಅಬ್ಬಿ ಫಾಲ್ಸ್ಗೆ ಬಸ್ ವ್ಯವಸ್ಥೆಯಿಲ್ಲ. ಆದ ಕಾರಣ ಪ್ರತಿಯೊಬ್ಬರು ಖಾಸಗಿ ವಾಹನದಲ್ಲಿ ಇಲ್ಲಿಗೆ ಆಗಮಿಸುತಾರೆ. ಒಟ್ಟಿನಲ್ಲಿ ಧಾರಾಕಾರ ಮಳೆಯಿಂದಾಗಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಅಬ್ಬಿ ಜಲಪಾತ ವೀಕ್ಷಣೆ ಮಾಡುವುದೇ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿದೆ.