ಕೊಡಗು: ಮಂಜಿನ ನಗರಿ ಮಡಿಕೇರಿ ಎಂದರೆ ನಮಗೆ ಥಟ್ ಅಂತ ನೆನಪಿಗೆ ಬರೋದು ಕಾಫಿ ತೋಟಗಳು. ಆದರೆ ಜಿಲ್ಲೆಯ ಶನಿವಾರಸಂತೆಯಲ್ಲಿ ಯುವ ರೈತನೊಬ್ಬ ತಮ್ಮ ಮನೆ ಮಹಡಿ ಮೇಲೆ ಡ್ರ್ಯಾಗನ್ ಫ್ರೂಟ್ ತೋಟವನ್ನೇ ನಿರ್ಮಾಣ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪಟ್ಟಣದ ನಿವಾಸಿಯಾದ ರೈತ ನಂದಕುಮಾರ್ ಅವರು ತಮ್ಮ ತಾರಸಿನ ಮೇಲೆ ಸದ್ಯ ಮಾರುಕಟೆಯಲ್ಲಿ ಬಹು ಬೇಡಿಕೆ ಇರುವ ಡ್ರ್ಯಾಗನ್ ಫ್ರೂಟ್ ಬೆಳೆದು, ಯುವಕರಿಗೆ ಮತ್ತು ರೈತರಿಗೆ ಪ್ರೇರಣೆಯಾಗಿದ್ದಾರೆ.
ಡ್ರ್ಯಾಗನ್ ಫ್ರೂಟ್ ಹೆಚ್ಚು ಪೌಷ್ಟಿಕಾಂಶದ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ. ಇನ್ನು ಮಧುಮೇಹ ಹೊಂದಿರುವ ರೋಗಿಗಳಿಗೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಈ ಹಣ್ಣನ್ನು ಶಿಫಾರಸು ಮಾಡಲಾಗುತ್ತದೆ. ಈ ಹಣ್ಣುಗಳು ಮಧ್ಯ ಅಮೆರಿಕದ ಮೂಲವಾದರೂ ಅವುಗಳನ್ನು ಈಗ ಭಾರತದಲ್ಲೂ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅದೇ ರೀತಿ, ನಂದಕುಮಾರ್ ಅವರು ಡ್ರ್ಯಾಗನ್ ಫ್ರೂಟ್ ಗಿಡಗಳೊಂದಿಗೆ ಚಿಕ್ಕ ತಾರಸಿನಲ್ಲಿ ತೋಟವನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಕಳೆದ ಒಂದು ವರ್ಷದಲ್ಲಿ 30 ಕೆಜಿಗೂ ಹೆಚ್ಚು ಇಳುವರಿಯನ್ನು ಪಡೆದಿದ್ದಾರೆ.
ಈ ಕುರಿತು ಯುವ ರೈತ ನಂದಕುಮಾರ್ ಮಾತನಾಡಿ, ಬೆಳೆಯಲ್ಲಿ ಪ್ರಯೋಗ ಮಾಡಲು, ನಾನು ಬೆಂಗಳೂರಿನಲ್ಲಿರುವ ನನ್ನ ಸಹೋದರಿಯ ಮನೆಯಿಂದ ಡ್ರ್ಯಾಗನ್ ಫ್ರೂಟ್ ಗಿಡವನ್ನು ತಂದಿದ್ದೆ. ಬೆಳೆಗೆ ಹೇರಳವಾದ ಸೂರ್ಯನ ಬೆಳಕು ಬೇಕು. ಹಾಗಾಗಿ ನಮ್ಮ ಮನೆಯ ತಾರಸಿಯಲ್ಲಿ ಒಂದನ್ನು ನೆಟ್ಟಿದ್ದೆ. ಪ್ಲಾಸ್ಟಿಕ್ ಡ್ರಮ್ ಕತ್ತರಿಸಿ ಡ್ರ್ಯಾಗನ್ ಫ್ರೂಟ್ ಗಿಡವನ್ನು ನೆಡಲಾಗಿದೆ. ನಂತರ ಹೆಚ್ಚು ಸಸ್ಯಗಳನ್ನು ಅಭಿವೃದ್ಧಿಪಡಿಸಿದೆ. ಈಗ ಮಹಡಿ ಮೇಲಿನ ಪ್ರದೇಶದಾದ್ಯಂತ ಸುಮಾರು 30 ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ನೆಟ್ಟಿದ್ದೇನೆ ಎಂದು ತಿಳಿಸಿದರು.