ಕೊಡಗು/ಮಡಿಕೇರಿ: ಕೊರೊನಾ ನಂತರ ಸರ್ಕಾರ ಘೋಷಿಸಿದ ಲಾಕ್‌ಡೌನ್‌ನಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ಸೋಂಕು ಸಂಕಷ್ಟಗಳ ಜೊತೆ ಜೊತೆಗೆ ವೈಯಕ್ತಿಕ ಸ್ವಚ್ಛತೆ, ವೃತ್ತಿ ಮಾರ್ಪಾಡುಗಳಿಂದ ಜೀವನದ ಬಂಡಿಯನ್ನು ನಡೆಸುವ ಕಲೆಯನ್ನು ಕಲಿಸಿದೆ. ಹಸಿವು ಮತ್ತು ಜೀವನ ಸಾಗಿಸುವ ಸವಾಲುಗಳ ಮಧ್ಯೆ ಮಹಿಳೆಯೊಬ್ಬರು ತಾವೇ ವಾಹನ ಓಡಿಸಿಕೊಂಡು ತರಕಾರಿಗಳನ್ನು ಮಾರಾಟ ಮಾಡುತ್ತಾ ಛಲದಿಂದ ಜೀವನ ನಡೆಸುತ್ತಿದ್ದಾರೆ.
ಕುಮಾರಿ ಎಂಬ ಮಹಿಳೆ ಸುಮಾರು ಹತ್ತು ವರ್ಷಗಳಿಂದ ಮಡಿಕೇರಿ ನಗರದಲ್ಲೇ ವಾಸಿಸುತ್ತಿದ್ದಾರೆ. ಮೊದಲಿನಿಂದಲೂ ಸಂಕಷ್ಟದಿಂದಲೇ ಜೀವನವನ್ನು ನಡೆಸುತ್ತಿರುವ ಇವರು, ಕೊರೊನಾ ಪ್ರಾರಂಭಕ್ಕೂ ಮೊದಲು ಬ್ಯಾಂಕಿನಲ್ಲಿ 5 ಲಕ್ಷ ರೂ ಸಾಲ ಪಡೆದುಕೊಂಡು ಚಿಕ್ಕದಾದ ಟಾಟಾ ಏಸ್ ಗಾಡಿಯನ್ನು ಖರೀದಿಸಿ, ಪಾನಿಪೂರಿ ಮಾರಾಟಕ್ಕೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿಕೊಂಡಿದ್ದರು. ಆದರೆ ವ್ಯಾಪಾರ ಪ್ರಾರಂಭಿಸಿದ ಕೇವಲ ಐದು ದಿನಗಳಲ್ಲೇ ಬರಸಿಡಿಲಿನಂತೆ ಬಂದ ಕೊರೊನಾ ಇವರನ್ನು ಸಂಕಷ್ಟಕ್ಕೆ ದೂಡಿತ್ತು.
ವ್ಯಾಪಾರವೇ ಇಲ್ಲದೆ ಸಂಕಷ್ಟದಲ್ಲಿದ್ದ ಕುಮಾರಿ ಧೃತಿಗೆಡಲಿಲ್ಲ. ಕುಟುಂಬದ ನಿರ್ವಹಣೆಗೆ ಪಾನಿಪೂರಿ ಗಾಡಿಯಲ್ಲೇ ತರಕಾರಿಗಳನ್ನು ಹಾಕಿಕೊಂಡು ನಗರ ಹಾಗೂ ಹಳ್ಳಿ, ಹಳ್ಳಿಗಳಿಗೆ ಸ್ವತಃ ತಾವೇ ವಾಹನವನ್ನು ಓಡಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರದಿಂದ ಅಷ್ಟೇನು ಆದಾಯ ಇಲ್ಲದಿದ್ದರೂ ಕುಟುಂಬದ ನಿರ್ವಹಣೆಗೆ ಹಾಗೂ ಬ್ಯಾಂಕಿನ ಸಾಲವನ್ನು ತೀರಿಸುತ್ತಿದ್ದಾರೆ.