ಕೊಡಗು:ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾಡ ಹಗಲೇ ಜಿಲ್ಲೆಯ ಅರೆಕಾಡು ಗ್ರಾಮದಲ್ಲಿ ಆನೆ ದಾಳಿ ನಡೆಸಿದ್ದು, ಕಟ್ಟೆಮಾಡು ಸಮೀಪದ ಪರಂಬು ನಿವಾಸಿ ದೇವಪ್ಪ ಸಾವನ್ನಪ್ಪಿದ್ದಾರೆ.
ಅರೆಕಾಡು ನೇತಾಜಿ ನಗರದ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡಾನೆ ಸಾರ್ವಜನಿಕರನ್ನು ಅಟ್ಟಾಡಿಸಿದೆ. ಕಾಡಾನೆ ಬಂದಿದ್ದರಿಂದ ಭಯಗೊಂಡ ಕಾರ್ಮಿಕರು ಓಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಆನೆ ಗೀಳಿಡುತ್ತಾ ಜನರಿದ್ದ ಸ್ಥಳಕ್ಕೆ ನುಗ್ಗಿ ದಾಂಧಲೆ ಮಾಡಿದೆ. ಹೀಗೆ ರಸ್ತೆಯಲ್ಲಿ ಆನೆ ಅಡ್ಡಾಡುತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತ ದೇವಪ್ಪ ಬಂದಿದ್ದಾರೆ . ಆನೆ ಸೀದಾ ಇವರ ಮೇಲೆ ದಾಳಿ ಮಾಡಿದೆ. ಕಾಡಾನೆ ದಾಳಿಗೆ ಸ್ಥಳದಲ್ಲಿಯೇ ದೇವಪ್ಪ ಮೃತಪಟ್ಟಿದ್ದಾರೆ.
ಘಟನೆಯಿಂದ ಸುತ್ತಮುತ್ತಲಿನ ಗ್ರಾಮದ ಜನರು ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಭಯದಲ್ಲಿ ಜೀವನ ಮಾಡುವಂತಾಗಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜು ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಸಿದ್ದಾಪುರ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವನ್ನು ನೋಡಿ, ಬಳಿಕ ಮೃತ ದೇವಪ್ಪ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾಡಾನೆ ಉಪಟಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.