ಕೊಡಗು:ಗ್ರಾಮೀಣ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಎಂಬುದು ಇದೀಗ ನರಕ ದರ್ಶನ ಮಾಡಿಸುತ್ತಿದೆ. ನೆಟ್‍ವರ್ಕ್ ಸಮಸ್ಯೆಯಿಂದ ಅದೆಷ್ಟೋ ಮಕ್ಕಳು ಆನ್ಲೈನ್ ಪಾಠ ಕೇಳಲಾಗದೇ ಪರದಾಡುತ್ತಿದ್ದಾರೆ. ಮಕ್ಕಳ ಕಷ್ಟ ನೋಡಿದ ಶಿಕ್ಷಕರೊಬ್ಬರು ಮೊಬೈಲ್ ನೆಟ್ವರ್ಕ್ಗೆ ಎತ್ತರದ ಅಟ್ಟಣಿಗೆ ನಿರ್ಮಾಣ ಮಾಡಿ ಮಕ್ಕಳ ಆನ್ಲೈನ್ ಕ್ಲಾಸ್ಗೆ ನೆರವಾಗಿದ್ದಾರೆ.
ನೆಟ್‍ವರ್ಕ್ ಸಮಸ್ಯೆ ಇರುವುದರಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್, 20 ಅಡಿ ಎತ್ತರದಲ್ಲಿ ಮರದ ಅಟ್ಟಣಿಗೆ ನಿರ್ಮಿಸಿ ಆನ್‍ಲೈನ್ ಕ್ಲಾಸ್ ಮಾಡಲು ಉಪಾಯ ಕಂಡುಕೊಂಡಿದ್ದಾರೆ.
ಚಿಕ್ಕಕೊಳತ್ತೂರು ಗ್ರಾಮದ ಮನೆಯ ಆವರಣದಲ್ಲಿ ಬೊಂಬು, ಬೈನೆ ಮರದ ತಡಿಕೆಗಳು, ತಂತಿ, ಬಲೆ ಹಾಗೂ ಹುಲ್ಲು ಬಳಸಿ ‘ಟ್ರೀ ಹೌಸ್’ ಮಾದರಿಯಲ್ಲಿ ತರಗತಿ ಕೋಣೆ ನಿರ್ಮಿಸಿದ್ದಾರೆ. ಮೊಬೈಲ್ ಫೋನ್ ಬಳಸಿ ಅವರು ತರಗತಿ ನಡೆಸುತ್ತಾರೆ. 500 ರೂ. ವೆಚ್ಚದ ಮೊಬೈಲ್ ಸ್ಟ್ಯಾಂಡ್ ಮತ್ತು ರೆಕಾರ್ಡರ್ ಖರೀದಿಸಿ ಬೋಧನೆಗೆ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಆಕರ್ಷಿಸುವಂಥ ಚಟುವಟಿಕೆಗಳನ್ನು ಮಾಡಿಸುತ್ತಾರೆ.