ಕೊಡಗು: ಕೆಲವು ದಿನಗಳ ಹಿಂದೆ ಕೊಡಗು ಜಿಲ್ಲೆಯ ಸಿದ್ದಾಪುರದ ಉರಗ ರಕ್ಷಕ ಸ್ನೇಕ್ ಸುರೇಶ್ ರಕ್ಷಣೆ ಮಾಡಿದ್ದ ಕೊಳಕುಮಂಡಲ ಹಾವೊಂದು ಬರೋಬ್ಬರಿ 41 ಮರಿಗಳಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸ್ನೇಕ್ ಸುರೇಶ್ ಅವರು ಸಿದ್ದಾಪುರದ ಮೈಸೂರು ರಸ್ತೆ ಬಡಾವಣೆಯಲ್ಲಿ ಗರ್ಭಿಣಿ ಕೊಳಕುಮಂಡಲ ಹಾವನ್ನು ಜೆಸಿಬಿ ಮುಖಾಂತರ ರಕ್ಷಣೆ ಮಾಡಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಸಣ್ಣ ಗಾಯವಾಗಿದ್ದರಿಂದ ಹಾಗೂ ಹಾವು ಗರ್ಭಿಣಿಯಾಗಿದ್ದರಿಂದ ಉರಗ ರಕ್ಷಕರ ತಂಡದ ಸದಸ್ಯರು ಸ್ನೇಕ್ ಸುರೇಶ್ ಅವರ ಮನೆಯಲ್ಲೇ ಹಾವಿಗೆ ಚಿಕಿತ್ಸೆ ನೀಡಿ, ರಕ್ಷಣೆ ಮಾಡಿದ್ದರು. ಇದೀಗ ಹಾವು 41 ಮರಿಗಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯದಿಂದ ಇದ್ದಾರೆ.
41 ಮರಿಗಳಿಗೆ ಜನ್ಮ ನೀಡಿದ ಕೊಳಕುಮಂಡಲ ಇಂದು ಪೊನ್ನಂಪೇಟೆ ನಿವಾಸಿ ಸ್ನೇಕ್ ನವೀನ ರಾಕಿ, ಸ್ನೇಕ್ ವಿನೋದ್ ಬಾವೆ, ಸ್ನೇಕ್ ಮನೋಜ್, ಸ್ನೇಕ್ ರೋಷನ್ ಅವರು ಕೊಳಕುಮಂಡಲ ಹಾವು ಮತ್ತು 41 ಮರಿಗಳನ್ನು ಅರಣ್ಯ ಅಧಿಕಾರಿ ಉಮಾಶಂಕರ್ ಅವರ ನೇತೃತ್ವದಲ್ಲಿ ತಿತಿಮತಿ ಅರಣ್ಯಕ್ಕೆ ಬಿಟ್ಟರು.
ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಸ್ನೇಕ್ ನವೀನ್ ರಾಕಿ ಹಾಗೂ ಸ್ನೇಕ್ ಸುರೇಶ್, ಜಿಲ್ಲೆಯಲ್ಲಿ ಯಾರೂ ಇಂತಹ ಕೆಲಸ ಮಾಡುವುದಿಲ್ಲ. ಆದರೆ, ಕೊಡಗು ತಕ್ಷ ಸಂರಕ್ಷಕರ ಸಂಘದ ಸದಸ್ಯರುಗಳು ಹಲವು ವರ್ಷಗಳಿಂದ ಹಾವಿನ ಮೊಟ್ಟೆಗಳನ್ನ ರಕ್ಷಣೆ ಮಾಡಿ, ಮರಿ ಮಾಡಿಸುವ ಕೆಲಸ ಹಾಗೂ ಹಾವುಗಳಿಗೆ ಗಾಯಗಳಾದರೆ ಚಿಕಿತ್ಸೆ ನೀಡಿ ಬಳಿಕ ಅರಣ್ಯಕ್ಕೆ ಬಿಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಇದೆಂಥಾ ವಿಚಿತ್ರ! ಬಾಲಕನಿಗೆ ಕಚ್ಚಿದ ನಾಗರಹಾವೇ ಸತ್ತೋಯ್ತು!