ಮಡಿಕೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ ನಾಳೆ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾನದ ಮಹತ್ವವನ್ನು ಸಾರುವ ಉದ್ದೇಶದಿಂದ ಸಾಂಕೇತಿಕವಾಗಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 210 ಹಾಗೂ 211 ನಗರಸಭೆಯ ಹಿರಿಯ ಪ್ರಾಥಮಿಕ ಶಾಲೆ, ಹಿಲ್ ರಸ್ತೆ, ಮಡಿಕೇರಿ ಇಲ್ಲಿನ ಮತಗಟ್ಟೆಯನ್ನು ಮಾದರಿ ಮತಗಟ್ಟೆಯಾಗಿ ವಿನ್ಯಾಸಗೊಳಿಸಲಾಗಿದೆ.
ಮಾದರಿ ಮತಗಟ್ಟೆಯಲ್ಲಿ ಲಭ್ಯವಿರುವ ಸೌಲಭ್ಯಗಳು: ಶಾಲಾ ಕಟ್ಟಡವನ್ನು ಕೊಡಗಿನ ಕಾಫಿ ಸಂಸ್ಕೃತಿಯನ್ನು ಸಾರುವ ಚಿತ್ರಕಲೆ ಮೂಲಕ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿಶೇಷಚೇತನರಿಗಾಗಿ ರೈಲಿಂಗ್ಸ್, ವ್ಹೀಲ್ಚೇರ್ ಹಾಗೂ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ರಿಯಾಯಿತಿ ದರದಲ್ಲಿ ಮತದಾರರಿಗೆ ಕುಡಿಯಲು ಕಾಫಿ ವ್ಯವಸ್ಥೆ ಮಾಡಲಾಗಿದೆ. (ರೂ.10 ಕ್ಕೆ ಫಿಲ್ಟರ್ ಕಾಫಿಯನ್ನು ನಿರೀಕ್ಷಣಾ ಕೊಠಡಿಯಲ್ಲಿ ಕುಳಿತು ಸವಿಯಬಹುದಾಗಿದೆ). ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಕಲ್ಪಿಸಲಾಗಿದೆ. ಪೀಠೋಪಕರಣಗಳು, ಫ್ಯಾನ್, ಬೆಳಕಿನ ವ್ಯವಸ್ಥೆಗಳನ್ನೊಳಗೊಂಡಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ವೈಟಿಂಗ್ ರೂಮ್ ಸೌಲಭ್ಯದೊಂದಿಗೆ ವ್ಯವಸ್ಥಿತ ರೀತಿಯಲ್ಲಿ ಮತದಾನ ಮಾಡಲು ಟೋಕನ್ ಸೌಲಭ್ಯ ಕಲ್ಪಿಸಲಾಗಿದೆ. ವಿಶೇಷಚೇತನರು ಹಾಗೂ ಹಿರಿಯ ನಾಗರಿಕ ಮತದಾರರ ಸಹಾಯಕ್ಕಾಗಿ ಸ್ವಯಂ ಸೇವಕರ ಸೇವೆಯನ್ನು ಒದಗಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಎರಡು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 75 ಮೈಕ್ರೋ ವೀಕ್ಷಕರ ನೇಮಕ ಮಾಡಲಾಗಿದ್ದು, ಮೈಕ್ರೋ ವೀಕ್ಷಕರುಗಳನ್ನು ಕ್ರಿಟಿಕಲ್ ಮತಗಟ್ಟೆಗಳಿಗೆ ಮಾತ್ರ ನಿಯೋಜಿಸಲಾಗುವುದು.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಸಿದ್ಧತೆ: ಮಸ್ಟರಿಂಗ್ ದಿನ ಮಸ್ಟರಿಂಗ್ ಕಾರ್ಯವನ್ನು ಸೆಕ್ಟರ್ವಾರು ಪ್ರತ್ಯೇಕ ಕೊಠಡಿಗಳಲ್ಲಿ ಮಾಡಲಾಗುವುದು. ಒಂದು ಕೊಠಡಿಗೆ ಒಬ್ಬರು ಸೆಕ್ಟರ್ ಅಧಿಕಾರಿ, ಇಬ್ಬರು ಸಿಬ್ಬಂದಿ ಹಾಗೂ ಇಬ್ಬರು ಗ್ರಾಮ ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ಕೊಠಡಿಗಳಿಗೆ ಮತಗಟ್ಟೆವಾರು ಇವಿಎಂಗಳನ್ನು ಹಾಗೂ ಚುನಾವಣಾ ಸಾಮಗ್ರಿಗಳನ್ನು ಸರಬರಾಜು ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಒದಗಿಸಲಾಗುವುದು.
ಡಿ-ಮಸ್ಟರಿಂಗ್ ದಿನ:ಡಿ-ಮಸ್ಟರಿಂಗ್ ಕಾರ್ಯಕ್ಕೆ ಒಟ್ಟು 12 ಟೇಬಲ್ಗಳನ್ನು ಮಾಡಲಾಗಿದ್ದು, 1 ಟೇಬಲ್ಗೆ 4 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿ ಇವಿಎಂ ಶಾಸನಬದ್ಧ ಹಾಗೂ ಶಾಸನಬದ್ಧವಲ್ಲದ ಲಕೋಟೆಗಳನ್ನು ಪರಿಶೀಲಿಸಿ ಪಡೆಯಲಿದ್ದಾರೆ.