ಕೊಡಗು : ಕಾರಿನ ಮೂಲಕ ಕೇರಳಕ್ಕೆ ಹೋಗುತ್ತಿದ್ದ ವ್ಯಕ್ತಿಗಳನ್ನು ರಸ್ತೆಯಲ್ಲಿ ತಡೆದು ಅವರಿಗೆ ಥಳಿಸಿ, ಕಾರಿನಿಂದ ಇಳಿಸಿ 50 ಲಕ್ಷ ಹಣ ದೋಚಿ, ಕಾರು ಸಮೇತ ಕಳ್ಳರು ಪರಾರಿಯಾಗಿರುವ ಘಟನೆ ಜಿಲ್ಲೆಯ ಗಡಿಭಾಗದಲ್ಲಿ ನಡೆದಿದೆ. ಈ ಕಾರು ಕೊಡಗು ಜಿಲ್ಲೆಯ ತಿತಿಮತಿ ಭದ್ರಗೋಳ ಬಳಿ ಪತ್ತೆಯಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯ ಗುತ್ತಿಗೆದಾರ ಕೆ. ಶಂಜಾದ್ ಹಾಗೂ ಅವರ ಸ್ನೇಹಿತ ಐನು ಎಂಬುವರು ತಮ್ಮ ಬಳಿ ಇದ್ದ 750 ಗ್ರಾಂ ಚಿನ್ನಾಭರಣಗಳನ್ನು ಹಣದ ಅವಶ್ಯಕತೆ ಇರುವುದರಿಂದ, ಹಾಗೆ ಮೈಸೂರಿನಲ್ಲಿ ಹೆಚ್ಚಿನ ದರ ಸಿಗುವ ಅವಕಾಶ ಇರುವುದರಿಂದ ಶುಕ್ರವಾರ ಮಧ್ಯಾಹ್ನ ಮೈಸೂರಿನಲ್ಲಿ ಅಶೋಕ ರಸ್ತೆಯ ಚಿನ್ನದ ಅಂಗಡಿಯಲ್ಲಿ ಕರಗಿಸಿ ಅದನ್ನು ಅಲ್ಲೇ ಮಾರಾಟ ಮಾಡಿ, 50 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ. ನಂತರ ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಗೋಳ ಸಮೀಪ ಬರುತ್ತಿದ್ದಾಗ ಅಲ್ಲಿ ಕೆಟ್ಟು ನಿಂತ ಲಾರಿಯ ಬಳಿಯಲ್ಲಿ ನಿಂತಿದ್ದ ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ, ಹಣ ನೀಡುವಂತೆ ಇವರನ್ನು ಕೇಳಿಕೊಂಡಿದ್ದಾರೆ.
ತಮ್ಮ ಬಳಿ ಯಾವುದೇ ಹಣವಿಲ್ಲ ಎಂದು ಹೇಳಿದಾಗ, ಇವರಿಬ್ಬರನ್ನು ಬೇರೆ ಕಾರಿನಲ್ಲಿ ಕೂರಿಸಿಕೊಂಡು ಇವರ HR 26, CL 5200 ಸಂಖ್ಯೆಯ ಕಾರನ್ನು ಅಪಹರಿಸಿದ್ದಾರೆ. ನಂತರ ಇವರನ್ನು ಅಪರಿಚಿತ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇವರಿಬ್ಬರೂ ನಡೆದುಕೊಂಡೇ ಬಂದು ಮುಖ್ಯ ರಸ್ತೆಗೆ ಸೇರಿ ನಂತರ ಪೇಪರ್ ಸಾಗಿಸುತ್ತಿದ್ದ ಕಾರನ್ನು ನಿಲ್ಲಿಸಿ, ಆ ಕಾರಿನಲ್ಲಿ ಬಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಕಾರಿನ ಡಿಕ್ಕಿಯಲ್ಲಿ ಇದ್ದ 50 ಲಕ್ಷ ರೂಪಾಯಿ ಹಾಗೂ ಕಾರು ಸೇರಿ ಒಟ್ಟು 70 ಲಕ್ಷ ರೂಪಾಯಿ ಮೌಲ್ಯ ಎಂದು ಅಂದಾಜಿಸಲಾಗಿದೆ.