ಕರ್ನಾಟಕ

karnataka

ETV Bharat / state

ಬಡವರ ಸುಸ್ಥಿರ ಬದುಕಿಗೆ ಪಂಚ ಗ್ಯಾರಂಟಿ ಯೋಜನೆ ಸಹಕಾರಿ: ಎನ್.ಎಸ್ ಬೋಸರಾಜು

ಶೂನ್ಯ ವಿದ್ಯುತ್ ಬಿಲ್​ ನೀಡುವ ಗೃಹ ಜ್ಯೋತಿ ಯೋಜನೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಮಡಿಕೇರಿಯಲ್ಲಿ ಚಾಲನೆ ನೀಡಿದರು.

NS Bosaraju
ಗೃಹ ಜ್ಯೋತಿ ಯೋಜನೆಗೆ ಚಾಲನೆ

By

Published : Aug 16, 2023, 9:54 AM IST

ಮಡಿಕೇರಿ : ಪ್ರತಿ ಬಡ ಕುಟುಂಬವೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು. ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಇಂಧನ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ 'ಉಚಿತ ಬೆಳಕು, ಸುಸ್ಥಿರ ಬದುಕು' ಕಾರ್ಯಕ್ರಮದಡಿ ಶೂನ್ಯ ವಿದ್ಯುತ್ ಬಿಲ್ಲು ನೀಡುವ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, "ರಾಜ್ಯ ಮತ್ತು ರಾಷ್ಟ್ರ ಅಭಿವೃದ್ಧಿ ಹೊಂದಲು ಎಲ್ಲ ಜಾತಿ, ಉಪ ಜಾತಿ, ಧರ್ಮದ ಜನರ ಜೀವನ ಮಟ್ಟ ಸುಧಾರಣೆ ಆಗಬೇಕು. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಬಡ ಜನರ ಕಲ್ಯಾಣಕ್ಕಾಗಿ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಲ್ಲಿ 4 ಯೋಜನೆಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತಂದಿದೆ" ಎಂದು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 1.30 ಲಕ್ಷ ಜನ ಹೆಸರು ನೋಂದಾಯಿಸಿದ್ದಾರೆ. 2.90 ಕೋಟಿ ರೂ. ಅನ್ನು ಸರ್ಕಾರ ಭರಿಸಿದೆ. ಗೃಹ ಜ್ಯೋತಿ ಜೊತೆಗೆ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಹೀಗೆ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ವಾರ್ಷಿಕ 60 ಸಾವಿರ ಕೋಟಿ ರೂ. ಭರಿಸುತ್ತದೆ. ಡಿಸೆಂಬರ್ ವೇಳೆಗೆ ಎಲ್ಲ ಯೋಜನೆಗಳು ಜಾರಿಗೊಳ್ಳಲಿವೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಕೆಳ ಸಮುದಾಯಗಳ ಜನರನ್ನು ಮೇಲೆತ್ತಲು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆ ಸರ್ಕಾರಿ ಬಸ್‍ಗಳಲ್ಲಿ ಕಡಿಮೆ ಜನರು ಪ್ರಯಾಣ ಮಾಡುತ್ತಿದ್ದರು. ಶಕ್ತಿ ಯೋಜನೆ ಜಾರಿಗೊಂಡ ನಂತರ ಬಸ್‍ನ ಆಸನಗಳು ಭರ್ತಿಯಾಗಿದ್ದು, ಸರ್ಕಾರಿ ಸಾರಿಗೆ ಸಂಸ್ಥೆ ಮತ್ತಷ್ಟು ಸದೃಢವಾಗುತ್ತಿದೆ ಎಂದು ವಿವರಿಸಿದರು.

ಅನ್ನಭಾಗ್ಯ ಯೋಜನೆ ಬಗ್ಗೆ ಮಾತನಾಡಿದ ಪೊನ್ನಣ್ಣ, ಕೇಂದ್ರ ಆಹಾರ ನಿಗಮವು ಅಕ್ಕಿ ನೀಡಲಾಗುವುದು ಎಂದು ಹೇಳಿ, ಆ ಮೇಲೆ ನೀಡಿರಲಿಲ್ಲ. ಆದರೂ ಸರ್ಕಾರ ಹಣ ನೀಡಲು ಮುಂದಾಯಿತು. ಆ ನಿಟ್ಟಿನಲ್ಲಿ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟಿ ಯೋಜನೆಗಳು ಬಡವರ ಆರ್ಥಿಕ ಸುಧಾರಣೆಗೆ ಸಹಕಾರಿ. ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಂಪತ್ತನ್ನು ಕ್ರೋಡಿಕರಿಸಿ ಎಲ್ಲರಿಗೂ ಹಂಚುತ್ತಿದೆ. ಈ ಆಧುನಿಕ ಬದುಕಿನಲ್ಲಿ ಜಾತಿ, ಮತ, ಧರ್ಮ, ಪಂಥ ಎಂಬುದು ಅಪ್ರಸ್ತುತ ಅಂದರೆ ಅತಿಶಯೋಕ್ತಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಮಾತನಾಡಿ, ಬಡ ಜನರನ್ನು ಮೇಲೆತ್ತುವುದು ಸರ್ಕಾರದ ಜವಾಬ್ದಾರಿ. ಆ ನಿಟ್ಟಿನಲ್ಲಿ ಸರ್ಕಾರ ಬಡವರ ಪರವಿದೆ. ಗೃಹ ಜ್ಯೋತಿ ಕಾರ್ಯಕ್ರಮದಿಂದ ಯಾವುದೇ ದುರುಪಯೋಗ ಇಲ್ಲ. 200 ಯೂನಿಟ್ ಮೀರಿದಲ್ಲಿ ವಿದ್ಯುತ್ ಬಿಲ್ಲು ಪಾವತಿಸಬೇಕಾಗುತ್ತದೆ. 1.29 ಲಕ್ಷ ಕುಟುಂಬಗಳು ಮಾತ್ರ ಹೆಸರು ನೋಂದಾಯಿಸಿದ್ದು, ಬಾಕಿ ಕುಟುಂಬಗಳ ಹೆಸರು ನೋಂದಣಿಗೆ ಕ್ರಮ ವಹಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ ಪಂ ಸಿಇಒ ವರ್ಣಿತ್ ನೇಗಿ, ಅಧೀಕ್ಷಕ ಎಂಜಿನಿಯರ್ ಎಂ.ಕೆ.ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಗೃಹ ಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ವಿದ್ಯುಕ್ತ ಚಾಲನೆ.. ಸಾಂಕೇತಿಕವಾಗಿ 10 ಜನರಿಗೆ ಶೂನ್ಯ ವಿದ್ಯುತ್ ಬಿಲ್ ವಿತರಣೆ

ABOUT THE AUTHOR

...view details