ಕೊಡಗು: ಜಿಲ್ಲೆಯು ಮೂರು ವರ್ಷಗಳಿಂದಲೂ ನಿರಂತರವಾಗಿ ಪ್ರಾಕೃತಿಕ ವಿಕೋಪದಿಂದ ತತ್ತರಿಸಿದೆ. ಜೊತೆಗೆ ಈ ಬಾರಿ ಕೊರೊನಾ ಮಹಾಮಾರಿ ಕೂಡ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಕೊಡಗಿಗೆ 40 ಕೋಟಿ ಬಿಡುಗಡೆ ಮಾಡಿದೆ.
ಭಾರತದ ಸ್ಕಾಟ್‍ಲೆಂಡ್, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆ ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಕಾಡಿನೊಳಗೆ ನಡೆದ ಅನುಭವ ನೀಡುವ ಕಾವೇರಿ ನಿಸರ್ಗಧಾಮ, ಮಂಜುಮುಸುಕಿದ ವೀವ್ ಪಾಯಿಂಟ್ ಇರುವ ರಾಜಾಸೀಟ್, ಮುಗಿಲೆತ್ತರದ ಬೆಡ್ಡಗಳಿಗೆ ಚುಂಬಿಸಿ ಒಂದಾಗುವ ಮಂಜಿನಗರಿ ಮಾಂದಲ್‍ಪಟ್ಟಿ, ಭೋರ್ಗರೆದು ಧುಮ್ಮಿಕ್ಕಿ ಬೆಳ್ನೊರೆಯ ಹಾಲಿನಂತೆ ಕಂಗೊಳಿಸುವ ಅಬ್ಬಿ, ಮಲ್ಲಳ್ಳಿ ಜಲಪಾತಗಳು. ಹೀಗೆ ಸಾಲು ಸಾಲು ಪ್ರವಾಸಿತಾಣಗಳು ಪ್ರವಾಸಿಗರ ಕಣ್ಮನಕೋರೈಸುತ್ತವೆ.
ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದಿಂದ 40 ಕೋಟಿ ಕೊಡುಗೆ ಆದರೆ, ಮೂರು ವರ್ಷಗಳಿಂದ ಎದುರಾದ ಪ್ರಾಕೃತಿಕ ವಿಕೋಪದ ಜೊತೆಗೆ ಕೊವಿಡ್ನಿಂದಾಗಿ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣ ಸ್ತಬ್ಧವಾಗಿತ್ತು. ವಾರದ ಹಿಂದೆಯಷ್ಟೇ ಮತ್ತೆ ಪ್ರವಾಸಿಗರಿಗೆ ವೀಕ್ಷಣೆಗೆ ಮುಕ್ತವಾಗಿರುವ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ 40 ಕೋಟಿ ರೂಪಾಯಿ ಅನುದಾನಕ್ಕೆ ಅಸ್ತು ಎಂದಿದೆ.
ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಾವಿರಾರು ಹೋಂಸ್ಟೇ, ರೆಸಾರ್ಟ್‍ಗಳು ಕೂಡ ನಡೆಯುತ್ತಿದ್ದವು. ಅವೆಲ್ಲವೂ ಸಂಪೂರ್ಣ ಸ್ಥಬ್ಧವಾಗಿದ್ದು, ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಕೊರೊನಾ ಇನ್ನೂ ಕೂಡ ಹರಡುತ್ತಲೇ ಇರುವುದರಿಂದ ನಾವು ಸಹ ಎಲ್ಲಿಯೂ ಎಚ್ಚರ ತಪ್ಪದೇ ಸಾಕಷ್ಟು ಮುಂಜಾಗ್ರತೆಗಳನ್ನು ವಹಿಸಬೇಕಾಗಿದೆ. ಬರುವ ಪ್ರವಾಸಿಗರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ತೋರಿಸಲು ಮತ್ತು ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರು.
ಒಟ್ಟಿನಲ್ಲಿ ಮೂರು ವರ್ಷಗಳಿಂದ ತತ್ತರಿಸಿ ಹೋಗಿರುವ ಪ್ರವಾಸೋದ್ಯಮಕ್ಕೆ ಪುನಃಶ್ಚೇತನ ನೀಡಲು ಸರ್ಕಾರ 40 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆ ಅನುದಾನ ಸರಿಯಾಗಿ ಬಳಕೆಯಾಗಿ ಪ್ರವಾಸಿ ತಾಣಗಳ ಸಹಜ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳಲಿ ಎನ್ನುವುದು ನಮ್ಮ ಆಶಯ.