ಕೊಡಗು :ಕಳೆದ ಎರಡು ವರ್ಷದಿಂದ ಜನರನ್ನ ಬೆಚ್ಚಿ ಬೀಳಿಸಿದ್ದ ಕೊರೊನಾ ಸೋಂಕು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿತ್ತು. ಈಗ ಮತ್ತೆ ಕೊಡಗು ಜಿಲ್ಲೆಯಲ್ಲಿ ಏಕಾಏಕಿ ಕೋವಿಡ್ ಸೋಂಕು ಹೆಚ್ಚಾಗ ತೊಡಗಿದೆ.
ಜಿಲ್ಲೆಯಲ್ಲಿ ಎರಡೇ ದಿನದಲ್ಲಿ 31 ಮಕ್ಕಳಿಗೆ ಕೊರೊನಾ ವಕ್ಕರಿಸಿದೆ. ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿರೋ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಇದೀಗ ದಿಢೀರ್ ಆಗಿ ಸೋಂಕು ಕಾಣಿಸಿದೆ.
ಕೊಡಗಿನ ನವೋದಯ ವಸತಿ ಶಾಲೆಯ 31 ಮಕ್ಕಳಿಗೆ ಕೊರೊನಾ ಈವರೆಗೆ ಜಿಲ್ಲೆಯಲ್ಲಿ ಕೇವಲ 8 ರಿಂದ 10 ಪ್ರಕರಣ ಮಾತ್ರ ವರದಿಯಾಗುತ್ತಿತ್ತು. ಆದ್ರೆ, ಇದೀಗ ಏಕಾಏಕಿ 30ಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಮಡಿಕೇರಿ ಸಮೀಪದ ಗಾಳಿಬೀಡಿನ ನವೋದ ಶಾಲೆಯ ವಿದ್ಯಾರ್ಥಿಗಳಿಗೆ ಕಳೆದೆರಡು ದಿನಗಳಿಂದ ಶೀತ, ಕೆಮ್ಮು ಕಾಣಿಸಿದೆ. ಇದನ್ನ ಅರಿತ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಆಗ ವಿದ್ಯಾರ್ಥಿಗಳಿಗೆ ಕೋವಿಡ್ ಇರುವುದು ದೃಡ ಪಟ್ಟಿದೆ.
ಮೊದಲ ದಿನ 270 ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿ 21 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. 2ನೇ ದಿನ ಸಿಬ್ಬಂದಿ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಿದ್ದು, 10 ವಿದ್ಯಾರ್ಥಿಗಳಿಗೆ ಸೋಂಕಿರೋದು ದೃಢಪಟ್ಟಿದೆ. ಇದೀಗ ನವೋದಯ ಶಾಲೆಯ ಒಟ್ಟು 31 ವಿದ್ಯಾರ್ಥಿಗಳಿಗೆ ಸೋಂಕಿರೋದು ದೃಢಪಟ್ಟಿದೆ.
ಎಲ್ಲಾ ವಿದ್ಯಾರ್ಥಿಗಳನ್ನ ಸದ್ಯ ಶಾಲೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಏಳು ದಿನಗಳ ಕಾಲ ವಿದ್ಯಾರ್ಥಿಗಳಿಗ ಕಡೆ ಹೆಚ್ಚಿನ ನಿಗಾವಹಿಸಲಾಗಿದೆ. ನವೋದಯ ಶಾಲೆಯನ್ನು ಸದ್ಯಕ್ಕೆ ಸೀಲ್‌ಡೌನ್ ಮಾಡಿ, ಎಲ್ಲಾ ರೀತಿಯ ಮುಜಾಗ್ರತಾ ಕ್ರಮವಹಿಸಲಾಗಿದೆ. ವಿದ್ಯಾರ್ಥಿಗಳೊಂದಿಗೆ 40 ಮಂದಿ ಸಿಬ್ಬಂದಿಗೂ ಟೆಸ್ಟ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಮೂರನೇ ಅಲೆಗೂ ಈ ಪ್ರಕರಣಗಳಿಗೂ ಯಾವುದೇ ಸಂಬಂಧ ಇಲ್ಲ. ಜಿಲ್ಲೆಯ ಜನತೆ ಹಾಗೂ ವಿದ್ಯಾರ್ಥಿಗಳ ಪೋಷಕರು ಯಾವುದೇ ಭಯ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಘಟನಾ ಸ್ಥಳಕ್ಕೆ ಡಿಹೆಚ್ಒ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳಿದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ.