ಕೊಡಗು: ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಮಳೆ ಹಾನಿ ಪ್ರದೇಶಗಳಾದ ಭಾಗಮಂಡಲ, ಬೆಂಗೂರು, ಚೆರಂಬಾಣೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿದರು. ಪ್ರವಾಹಪೀಡಿತ ಕುಶಾಲನಗರದ ಸಾಯಿ ಬಡಾವಣೆ, ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಸಂತ್ರಸ್ಥರ ಜೊತೆ ಮಾತುಕತೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನೈಸರ್ಗಿಕ ವಿಕೋಪ ನಿರ್ವಹಣೆಗಾಗಿ ಜಿಲ್ಲಾಧಿಕಾರಿಯ ಪಿಡಿ ಖಾತೆಯಲ್ಲಿ 56 ಕೋಟಿ ರೂಪಾಯಿ ಹಣವಿದ್ದು, ಪ್ರಸಕ್ತ ಅವಧಿಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗಾಗಿ ಜಿಲ್ಲಾಡಳಿತದಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸಿದಲ್ಲಿ 20 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದರು.
ಪ್ರಾಕೃತಿಕ ವಿಕೋಪ ನಿರ್ವಹಣೆಗಾಗಿ ಈಗಾಗಲೇ ಬಿಡುಗಡೆ ಆಗಿರುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಒಂದು ತಿಂಗಳಲ್ಲಿ ಮನೆ ಕಾಮಗಾರಿಗಳು, ಇತರೆ ಹಳೇ ಕಾಮಗಾರಿಗಳ ಕೆಲಸ ಆಗಿದ್ದಲ್ಲಿ ಹಣ ಪಾವತಿಸಬೇಕು. ಕಾಮಗಾರಿ ಆರಂಭಿಸದಿದ್ದಲ್ಲಿ ನೋಟಿಸ್ ನೀಡಿ ಮಾಹಿತಿ ಪಡೆದು ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಖಾತೆಯಲ್ಲಿ 540 ಕೋಟಿ ರೂ: ಕಾಮಗಾರಿ ಬಾಕಿ ಇದ್ದಲ್ಲಿ ಸರ್ಕಾರದ ಹಂತದಲ್ಲಿ ಮಾಹಿತಿ ನೀಡುವುದು ಕಷ್ಟವಾಗುತ್ತದೆ. ಆದ್ದರಿಂದ ಮನೆ ಕಾಮಗಾರಿಗಳು ಸೇರಿದಂತೆ ಇತರೆ ಪ್ರಾಕೃತಿಕ ವಿಕೋಪದಡಿ ತೆಗೆದುಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕಂದಾಯ ಸಚಿವರು ನಿರ್ದೇಶನ ನೀಡಿದರು. ನೈಸರ್ಗಿಕ ವಿಕೋಪ ಎದುರಿಸಲು ರಾಜ್ಯದ ಹಲವು ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 540 ಕೊಟಿ ರೂ ಇದ್ದು, ಕೊಡಗು ಜಿಲ್ಲೆಗೆ ಹೆಚ್ಚುವರಿಯಾಗಿ 32 ಕೋಟಿ ರೂ ಬಿಡುಗಡೆ ಆಗಿದೆ ಎಂದು ಸಚಿವರು ಮಾಹಿತಿ ನೀಡಿದರು.