ಕುಶಾಲನಗರ/ ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಾರಂಗಿ ಜಲಾಶಯದಿಂದ 12,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದೆ. ಅಲ್ಲದೇ ರಾತ್ರಿಯಿಡಿ ವಿಪರೀತ ಗಾಳಿ -ಮಳೆ ಸುರಿಯುತ್ತಿದೆ. ಪ್ರಮುಖ ಜಲಪಾತಗಳು, ಹಳ್ಳ, ತೊರೆಗಳು ತುಂಬಿ ಹರಿಯುತ್ತಿವೆ. ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗುತ್ತಿವೆ. ಕಾವೇರಿ ಬೋರ್ಗರೆಯುತ್ತಿದ್ದು, ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಗೆ ನೀರಿನ ಒಳ ಹರಿವು ಹೆಚ್ಚಾಗಿದೆ.
ಹಾರಂಗಿಯಿಂದ 12 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಜಿಲ್ಲಾಡಳಿತ ಆಗಸ್ಟ್ 10 ರವರೆಗೆ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಆರೇಂಜ್ ಹಾಗೂ ಯೆಲ್ಲೋ ಅಲರ್ಟ್ ಕೂಡ ಘೋಷಿಸಿದೆ. ಜಿಲ್ಲೆಯಲ್ಲಿ ಮುಂಗಾರು ಬಿರುಸು ಪಡೆದುಕೊಂಡಿರುವುದರಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ ಎದುರಾಗದಿರಲಿ ಎಂದು ನದಿಗೆ ನೀರನ್ನು ಅಧಿಕಾರಿಗಳು ಹರಿಸಿದ್ದಾರೆ. ಅಲ್ಲದೇ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ.
ನಿನ್ನೆ ಮಧ್ಯಾಹ್ನ ಏಕಾಏಕಿ 10 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಹರಿಸಿದ್ದರಿಂದ ಕಾವೇರಿ ಬಡಾವಣೆ ಜಲಾವೃತವಾಗಿತ್ತು. ಇದೀಗ ಹೆಚ್ಚಿನ ನೀರನ್ನು ಹೊರ ಬಿಡುತ್ತಿರುವುದರಿಂದ ಹಾಗೂ ಎಡೆ ಬಿಡದೇ ಮಳೆ ಸುರಿಯುತ್ತಿರುವುದರಿಂದ ಕುಶಾಲನಗರ ನಿವಾಸಿಗಳಿಗೆ ಆತಂಕವೂ ಹೆಚ್ಚಾಗಿದೆ.