ಕಲಬುರಗಿ:ನಿನ್ನೆಯಷ್ಟೇ ಪುಡಾರಿ ರೌಡಿ ಗ್ಯಾಂಗ್‌ವೊಂದು ಮನೆಗೆ ನುಗ್ಗಿ ಯುವಕನ ಕೊಲೆ ನಡೆಸಿರುವ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೋರ್ವ ಯುವಕನನ್ನು ಹತ್ಯೆ ಮಾಡಲಾಗಿದೆ. ಕಲಬುರಗಿ ಹೊರವಲಯದ ಕಾಳನೂರ್ ಧಾಬಾ ಬಳಿ ಬುಧವಾರ ರಾತ್ರಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೈಯ್ಯಲಾಗಿದೆ.
ಇಲ್ಲಿನ ಫಿಲ್ಟರ್ ಬೆಡ್ ನಿವಾಸಿ ಆಕಾಶ್ (21) ಕೊಲೆಯಾದ ಯುವಕ. ಆಕಾಶ್ ಓಂನಗರದ ಗ್ಯಾರೆಜ್ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತ ಶ್ರೀನಿಧಿ ಎಂಬಾತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪ್ರೀತಿಯೇ ಕಾರಣ?:
ಕೊಲೆಯಾದ ಯುವಕ ಆಕಾಶ್ ತನ್ನ ಸ್ನೇಹಿತ ಶ್ರೀನಿಧಿಯ ಸಹೋದರಿಯನ್ನು ಪ್ರೀತಿಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಅದೇ ಯುವತಿಯನ್ನು ಕರೆದುಕೊಂಡು ಆಕಾಶ್ ಓಡಿ ಹೋಗಿದ್ದನಂತೆ. ಇದೇ ವಿಚಾರಕ್ಕೆ ಸ್ನೇಹಿತ ಆಕಾಶ್ನನ್ನು ಮುಗಿಸಬೇಕೆಂದು ಶ್ರೀನಿಧಿ ಪ್ಲಾನ್ ಮಾಡಿದ್ದ. ಅದರಂತೆ ನಿನ್ನೆ ರಾತ್ರಿ ಆಕಾಶ್ನನ್ನು ಶ್ರೀನಿಧಿಯೇ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಹೀಗೆ ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಏರಿಕೆ ಆಗುತ್ತಿದ್ದು, ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಡಬರಾಬಾದ್ ಬಡಾವಣೆಯಲ್ಲಿ ಗ್ಯಾಂಗ್‌ವೊಂದು ಮನೆಯೊಂದಕ್ಕೆ ನುಗ್ಗಿ ಮಹೇಶ್ ಎಂಬ ಯುವಕನನ್ನು ಹತ್ಯೆ ಮಾಡಿತ್ತು. ಇದೀಗ ರಾತ್ರಿ ಮತ್ತೋರ್ವ ಯುವಕನ ಕೊಲೆಯಾಗಿದೆ.
ಇದನ್ನೂ ಓದಿ:ಕಲಬುರಗಿ : ರೌಡಿಸಂನಲ್ಲಿ ಹೆಸರು ಮಾಡಲು ಯುವಕನ ಬರ್ಬರ ಹತ್ಯೆ!