ಕಲಬುರಗಿ: ಆ ಯುವಕ ಸಾಫ್ಟ್‌ವೇರ್ ಇಂಜಿನಿಯರ್. ಎಸಿ ರೂಮ್ನಲ್ಲಿ ಕುಳಿತು ಕೈತುಂಬಾ ಹಣ ಸಂಪಾದನೆ ಮಾಡಬಹುದಿತ್ತು. ಆದ್ರೆ ಕೃಷಿ ಆಸಕ್ತಿ ಈತನನ್ನು ಜಮೀನಿಗೆ ತಂದು ನಿಲ್ಲಿಸಿದೆ. ಬಹುಬೆಳೆ ಬೆಳೆಯುವ ಮೂಲಕ ಸಾಫ್ಟ್‌ವೇರ್ ಮಾತ್ರವಲ್ಲ, ಕೃಷಿಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಪ್ರಥಮ ಪ್ರಯತ್ನದಲ್ಲಿಯೇ ವಾಟರ್ ಆ್ಯಪಲ್ ಬೆಳೆ ಸಮೃದ್ಧವಾಗಿ ಬೆಳೆದು ಇತರ ಯುವಕರಿಗೆ ಮಾದರಿಯಾಗಿದ್ದಾರೆ.
ತೊಗರಿ ನಾಡು ಖ್ಯಾತಿಯ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕು ನೆಲೋಗಿ ಗ್ರಾಮದ ದೇವು ಮುದ್ದ ಎಂಬುವರೇ ಕೃಷಿಯಲ್ಲಿ ಸಾಧನೆ ಮಾಡಿದ ಯುವಕ. ಎಂಟು ವರ್ಷಗಳ ಕಾಲ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿ ನಂತರ ತಮ್ಮೂರು ನೇಲೋಗಿಗೆ ಬಂದು ವಾಸವಾಗಿದ್ದಾರೆ. ಗ್ರಾಮಕ್ಕೆ ಬಂದವರೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಸಾಂಪ್ರದಾಯಿಕ ಒಂದೇ ಬೆಳೆಗೆ ಕಟ್ಟುಬೀಳದೆ ದೇವು ವಿಭಿನ್ನ ಪ್ರಯತ್ನದ ಮೂಲಕ ಸಾಧನೆಯತ್ತ ಹೆಜ್ಜೆ ಹಾಕಿದ್ದಾರೆ.
ಐದು ಎಕರೆ ಹೊಲದಲ್ಲಿ 150ಕ್ಕೂ ಹೆಚ್ಚು ತೆಂಗಿನ ಗಿಡಗಳು, ನಾನಾ ಬಗೆಯ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಆಯಾ ಸೀಜನ್ಗೆ ಅನುಗುಣವಾಗಿ ಕಟಾವು ಮಾಡಿ ಮಾರಾಟ ಮಾಡುವ ಮೂಲಕ ಕೈತುಂಬ ಹಣ ಮಾಡುತ್ತಿದ್ದಾರೆ.ಇಷ್ಟು ಮಾತ್ರವಲ್ಲ ಏನಾದರೂ ಹೊಸತು ಮಾಡುವ ಹೆಬ್ಬಯಕೆಯಿಂದ ವಾಟರ್ ಆ್ಯಪಲ್ ಹಣ್ಣು ಬೆಳೆದಿದ್ದಾರೆ. ಈ ಭಾಗದಲ್ಲಿ ವಾಟರ್ ಆ್ಯಪಲ್ ಅಂದ್ರೇ ಜನರಿಗೆ ಸರಿಯಾಗಿ ಗೊತ್ತಿಲ್ಲ. ಆದ್ರೂ ಯೂಟೂಬ್‌ನಲ್ಲಿ ಇದರ ಬಗ್ಗೆ ತಿಳಿದುಕೊಂಡು ತಮ್ಮ ಜಮೀನಿನಲ್ಲಿ ಈ ಹಣ್ಣು ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ.