ಕಲಬುರಗಿ:ಬಿಜೆಪಿ ಪಕ್ಷ ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ. ಇದೊಂದು ವದಂತಿ ಅಷ್ಟೆ. ಯಡಿಯೂರಪ್ಪನವರು ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನಗರದ ಕಲ್ಲಹಂಗರಗಾ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಕರ್ನಾಟಕ ಮಟ್ಟಿಗೆ ಒಂದು ದೊಡ್ಡ ಶಕ್ತಿ ಎಂಬ ಮಾತನ್ನು ಸ್ವತಃ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರೇ ಅನೇಕ ಬಾರಿ ಹೇಳಿದ್ದಾರೆ.
ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಅವರು ಶ್ರಮಿಸುತ್ತಿದ್ದಾರೆ. ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮುಂದಿನ ಬಾರಿ ಬಿಜೆಪಿ 130 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಕಾರ್ಯೊನ್ಮೋಖರಾಗಿದ್ದಾರೆ. ಯಡಿಯೂರಪ್ಪನವರ ಬಗ್ಗೆ ಯಾರಿಗೂ ಯಾವುದೇ ರೀತಿ ಅನುಮಾನ ಬೇಡ ಎಂದು ಸ್ಪಷ್ಟನೆ ನೀಡಿದರು.
ಪ್ರಿಯಾಂಕ್ ಖರ್ಗೆಗೆ ಟಾಂಗ್: ಬಿಜೆಪಿ ಬ್ರೋಕರ್ ಪಾರ್ಟಿ ಮತ್ತು ಬಿಜೆಪಿಯವರು ವಿಧಾನಸೌಧವನ್ನು ಶಾಪಿಂಗ್ ಮಾಲ್ ಮಾಡಿದಾರೆ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿ.ವೈ ವಿಜಯೇಂದ್ರ ತಿರುಗೇಟು ನೀಡಿದರು. ಪ್ರಿಯಾಂಕ್‌ರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗೆ ಆಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ಕಳೆದುಕೊಂಡಿದೆ. ಈ ಹಿಂದೆ ಕಾಂಗ್ರೆಸ್ 400 ಕ್ಕೂ ಅಧಿಕ ಲೋಕಸಭೆ ಸ್ಥಾನಗಳನ್ನು ಗೆದ್ದಿತ್ತು. ಇಂದು ಕಾಂಗ್ರೆಸ್ ಗತಿ ಏನಾಗಿದೆ? ಕೇವಲ 50 ರಿಂದ 60 ಸ್ಥಾನಗಳನ್ನು ಮಾತ್ರ ಗೆದ್ದು ದಾರುಣ ಸ್ಥಿತಿಗೆ ತಲುಪಿದೆ. ಆ ಪಕ್ಷದ ಮುಖಂಡರು ಮಾಡಿದ್ದ ಭ್ರಷ್ಟಾಚಾರದಿಂದ ಕಾಂಗ್ರೆಸ್ ಅಧೋಗತಿಗೆ ತಲುಪಿದೆ. ಚುನಾವಣೆ ಬಂದಾಗ ವಿಪಕ್ಷಗಳ ಟೀಕೆ ಸಾಮಾನ್ಯ. ಈ ಬಗ್ಗೆ ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಬಸವೇಶ್ವರರ ಪಂಚಲೋಹದ ಪುತ್ಥಳಿ ಅನಾವರಣ: ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಬಸವೇಶ್ವರರ ಪಂಚಲೋಹದ ಪುತ್ಥಳಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಪೂಜ್ಯ ಗುರುಪಾದ ಲಿಂಗ ಶಿವಯೋಗಿಗಳು, ಡಾ. ಚನ್ನಮಲ್ಲ ಶಿವಾಚಾರ್ಯರು, ಸಿದ್ದಮಲ್ಲ ಶಿವಾಚಾರ್ಯರು, ಶಂಕರಾನಂದ ಸ್ವಾಮೀಜಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಬಸವಕಲ್ಯಾಣ ಶಾಸಕ ಶರಣು ಸಲಗರ್ ಮತ್ತಿತರರು ಉಪಸ್ಥಿತರಿದ್ದರು.