ಕಲಬುರಗಿ : ಯಡಿಯೂರಪ್ಪ ಸಮರ್ಥ ನಾಯಕರ ಗುಂಪಿಗೆ ಸೇರಿದವರು. ಅವರನ್ನು ಸದ್ಯಕ್ಕೆ ಸಿಎಂ ಸ್ಥಾನದಿಂದ ಇಳಿಸೋಕೆ ಪಿತೂರಿಗಳು ನಡೆದಿರೋದು ಸರಿಯಾದ ಬೆಳವಣಿಗೆಯಲ್ಲ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸೋಕೆ ಯತ್ನಿಸುತ್ತಿರೋದು ಸೂಚನೀಯ ಸಂಗತಿ. ಇದು ಸರಿಯಾದ ಬೆಳವಣಿಗೆಯಲ್ಲ. ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಅವರು ತಮ್ಮ ಸಮಯದಾವನ್ನು ಮಾತ್ರವಲ್ಲದೆ ಅನ್ಯ ಸಮುದಾಯಗಳನ್ನೂ ಸಮಾನವಾಗಿ ಕಾಣುವಂತವರು. ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಅಷ್ಟು ಪ್ರಬಲ ನಾಯಕರು ಸದ್ಯಕ್ಕೆ ಇಲ್ಲ ಎಂದು ಸ್ವಾಮೀಜಿ ಅವರು ಬಿಎಸ್‌ವೈ ಪರ ಬ್ಯಾಟ್ ಬೀಸಿದ್ದಾರೆ.
ಭೂ ಸುಧಾರಣಾ ಕಾಯ್ದೆ ಕುರಿತು ಏಕಪಕ್ಷೀಯ ನಿರ್ಧಾರ ಸರಿಯಲ್ಲ :ಇದೇ ವೇಳೆ ಮಾತನಾಡಿದ ಶ್ರೀಗಳು, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಷಯವಾಗಿ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರದ ಈ ವಿಚಾರವಾಗಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದರು.
ಕಾಯ್ದೆಗೆ ಸಂಬಂಧಿಸಿದಂತೆ ಕೃಷಿ ತಜ್ಞರೊಂದಿಗೆ ಚರ್ಚಿಸದೇ ಜಾರಿಗೆ ಮುಂದಾಗಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ಈಗಲಾದ್ರೂ ಕೇಂದ್ರ ಸರ್ಕಾರ ಎಚ್ಚೆತ್ತು ರೈತ ವಿರೋಧಿ ನಿಲುವುಗಳನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.