ಕರ್ನಾಟಕ

karnataka

ETV Bharat / state

ಸಾರಾಯಿ ಬಂದ್ ಮಾಡ್ರಿ, ಇಲ್ಲಾಂದ್ರ ನಮ್ ತಾಳಿ ತಂದು ನಿಮ್​ ಕೊರಳಿಗೆ ಕಟ್ಕೋರಿ - kalaburagi Sedam Excise prospector Ravikumar Patil

ಸೇಡಂ ತಾಲೂಕಿನ ಭೀಮನಗರ ಗ್ರಾಮದ ಕಿರಾಣಿ ಅಂಗಡಿ, ಪಾನ್ ಶಾಪ್, ಹೋಟೆಲ್​ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರ ವಿರುದ್ಧ ಆಕ್ರೋಶಗೊಂಡ ಮಹಿಳೆಯರು, ಅಬಕಾರಿ ಕಚೇರಿಗೆ ಆಗಮಿಸಿ, ಅಬಕಾರಿ ನಿರೀಕ್ಷಕ ರವಿಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

alcohol
ಅಬಕಾರಿ ನಿರೀಕ್ಷಕ ರವಿಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು

By

Published : Jan 7, 2022, 9:16 AM IST

ಸೇಡಂ: ಕಿರಾಣಿ ಅಂಗಡಿ, ಹೋಟೆಲ್​ನಲ್ಲಿ ಸಾರಾಯಿ ಮಾರ್ತಾರ. ಇದ್ರಿಂದ ನಮ್ ಗಂಡಂದಿರು ಹಾಳಾಗ್ತಾರೆ. ಸಾರಾಯಿ ಬಂದ್ ಮಾಡ್ರಿ ಇಲ್ಲಾಂದ್ರೆ ನಮ್ ತಾಳಿ ತಂದು ನಿಮ್ ಕೊರಳಿಗೆ ಕಟ್ಕೋರಿ ಎಂದು ಸೇಡಂ ತಾಲೂಕಿನ ಭೀಮನಗರ ಹೂಡಾದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಕಿರಾಣಿ ಅಂಗಡಿ, ಪಾನ್ ಶಾಪ್, ಹೋಟೆಲ್​ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರ ವಿರುದ್ಧ ದಂಗೆದ್ದ ಮಹಿಳೆಯರು, ಅಬಕಾರಿ ಕಚೇರಿಗೆ ಆಗಮಿಸಿ, ಅಬಕಾರಿ ನಿರೀಕ್ಷಕ ರವಿಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ, ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯಿರಿ, ಇಲ್ಲವಾದರೆ ನಮ್ಮ ಮಾಂಗಲ್ಯ ತಂದು ನ್ಯಾಯಾಲಯಕ್ಕೆ ಕಟ್ಟುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಬಕಾರಿ ನಿರೀಕ್ಷಕ ರವಿಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮಹಿಳೆ ಅಂಬವ್ವ, ಗ್ರಾಮದ ತುಂಬೆಲ್ಲಾ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಹಗಲಲ್ಲೇ ಗ್ರಾಮದ ಅನೇಕ ಯುವಕರು ಮದ್ಯಕ್ಕೆ ಮಾರುಹೋಗಿ ಮನೆಗೂ ಬಾರದಂತಾಗಿದ್ದಾರೆ. ಕುಡಿದ ಅಮಲಿನಲ್ಲಿ ಅನೇಕರು ಶಾಲೆಗೆ ಹೋಗುವ ವಿದ್ಯಾರ್ಥಿನಿಯರನ್ನು ಚುಡಾಯಿಸಿದ ಪರಿಣಾಮ ಅನೇಕ ಮಕ್ಕಳು ಶಾಲೆಯಿಂದ ವಂಚಿತರಾಗುತ್ತಿದ್ದಾರೆ. ಮನೆಗೆ ನಂದಾ ದೀಪವಾಗಬೇಕಿದ್ದ ಯುವಕರು ಮದ್ಯಕ್ಕೆ ದಾಸರಾಗಿ ಸಾವನ್ನಪ್ಪುತ್ತಿದ್ದಾರೆ‌ ಎಂದು ಅಳಲು ತೋಡಿಕೊಂಡರು.

ಈ ವೇಳೆ, ಗ್ರಾಮ ಪಂಚಾಯತ್​ ಸದಸ್ಯೆ ಲಕ್ಷ್ಮೀಬಾಯಿ ಜಮಾದಾರ, ಮಲ್ಲಿಕಾರ್ಜುನ ವಡ್ಡೆರಾಜ, ಹಣಮಂತ ಇಟಗಿ, ಬಸಣ್ಣ ಜಮಾದಾರ, ಭೀಮಾಶಂಕರ ನಾಯಕ, ಭೀಮಣ್ಣ ವಿಕಾರಾಬಾದ, ಬೀರಪ್ಪ ಪೂಜಾರಿ, ಹಣಮಂತ ರಾಂಪೂರ, ರಹಿಮ್‌ ಜಮಾದಾರ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details