ಕರ್ನಾಟಕ

karnataka

ಕಲಬುರಗಿ ಜಿಲ್ಲೆಯಲ್ಲಿ ಮಳೆ ಅವಾಂತರ: ಮನೆ ಮಾಳಿಗೆ ಕುಸಿದು ಮಹಿಳೆ ಸಾವು

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಬಿ ಗ್ರಾಮದಲ್ಲಿ ನಿರಂತರವಾಗಿ ಸುರಿದ ಮಹಾಮಳೆಗೆ ಮನೆ ಮಾಳಿಗೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

By

Published : Jul 24, 2023, 9:02 PM IST

Published : Jul 24, 2023, 9:02 PM IST

ಕಲಬುರಗಿಯಲ್ಲಿ ಮನೆ ಮಾಳಿಗೆ ಕುಸಿದು ಮಹಿಳೆ ಮೃತ
ಕಲಬುರಗಿಯಲ್ಲಿ ಮನೆ ಮಾಳಿಗೆ ಕುಸಿದು ಮಹಿಳೆ ಮೃತ

ಕಲಬುರಗಿಯಲ್ಲಿ ಮನೆ ಮಾಳಿಗೆ ಕುಸಿದು ಮಹಿಳೆ ಮೃತ

ಕಲಬುರಗಿ : ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆ ಸೇರಿದಂತೆ ಜೇವರ್ಗಿ ತಾಲೂಕಿನ ಹಲವೆಡೆ ಸಾಕಷ್ಟು ಅವಾಂತರ ಸೃಷ್ಟಿಯಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜೇವರ್ಗಿ ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಮನೆ ಮಾಳಿಗೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿರಾಳ ಬಿ ಗ್ರಾಮದಲ್ಲಿ ನಡೆದಿದೆ.

ಬಸಮ್ಮ ಗಂಡ ಬಸವರಾಜ ಬಳಗಾರ (35) ಮೃತಪಟ್ಟ ಮಹಿಳೆ. ನಿರಂತರವಾಗಿ ಮಳೆ ಸುರಿದ ಪರಿಣಾಮ ಮನೆಯ ಛಾವಣಿ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ. ಮನೆ ಕುಸಿದು ಮೃತಪಟ್ಟ ಬಸಮ್ಮ ಬಳಗಾರ ಅವರು ಕಡು ಬಡವರಾಗಿದ್ದು, ಮೂರು ಜನ ಚಿಕ್ಕ ಮಕ್ಕಳಿದ್ದು, ಕುಟುಂಬಕ್ಕೆ ಸರ್ಕಾರ ಕೂಡಲೇ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಗ್ರಾಮದ ಮುಖಂಡ ಪರಮೇಶ್ವರ ಬಿರಾಳ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕುರನಳ್ಳಿ ಶಾಲೆಯ ಗೋಡೆ ಶಿಥಿಲ-ಆತಂಕದಲ್ಲಿ ಬೋಧನೆ : ಜೇವರ್ಗಿ ತಾಲೂಕಿನ ಕುರನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಆಗಲೋ, ಈಗಲೋ ಎನ್ನುವಂತಾಗಿದೆ. ಶಾಲೆಯ ಕಟ್ಟಡ ಹಳೆಯದಾಗಿದ್ದು, ನಿರಂತರ ಮಳೆಯಿಂದ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದೆ. ಮಕ್ಕಳು ಜೀವ ಭಯದಲ್ಲೇ ಅಭ್ಯಾಸ ಮಾಡುವ ಪರಿಸ್ಥಿತಿ ಉಂಟಾಗಿದೆ.

ಪ್ರತಿದಿನ ಶಾಲೆಯ ಛಾವಣಿ ಹಂತ ಹಂತವಾಗಿ ಉದುರಿ ಬೀಳುತ್ತಿದೆ. ಈಗಾಗಲೇ ಮಾಳಿಗೆಯಲ್ಲಿನ ಸಿಮೆಂಟ್ ಪದರದ ಭಾಗ ಮಕ್ಕಳ ತಲೆಯ ಮೇಲೆ ಬಿದ್ದು, ತಲೆಯ ತೂತು ಬಿದ್ದಿವೆ. ಮಳೆ ಬಂದರೆ ಸಾಕು ಶಾಲೆಯ ಆವರಣದಲ್ಲಿ ನೀರು ತುಂಬಿಕೊಳ್ಳುತ್ತದೆ. ಅಲ್ಲದೇ, ತರಗತಿ ಕೋಣೆಗಳಲ್ಲಿ ಪಾದ ಮುಗುಳುವಷ್ಟು ನೀರು ನಿಲ್ಲುತ್ತದೆ. ಶಾಲೆಯ ಸುತ್ತಮುತ್ತ ಸ್ವಚ್ಛತೆ ಇಲ್ಲದೇ ತುಂಬಾ ಗಲೀಜು ವಾತಾವರಣ ಸೃಷ್ಟಿಯಾಗಿದೆ. ಹುಳ ಹುಪ್ಪಟೆಯ ಭಯದಲ್ಲೇ ನಿತ್ಯವೂ ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಹಲವಾರು ವರ್ಷಗಳಿಂದ ಶಾಲಾ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ. ಯಾವಾಗ ಕಟ್ಟಡ ಕುಸಿದು ಮಕ್ಕಳ ಮೇಲೆ ಬಿದ್ದು, ಮಕ್ಕಳ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬ ಭಯ ಉಂಟಾಗಿದೆ. ಈ ಭಯದಲ್ಲೇ ಪಾಲಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸದೇ, ಖಾಸಗಿ ಶಾಲೆಯ ಮೊರೆ ಹೋಗುತ್ತಿದ್ದಾರೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ಸಾಮಾಜಿಕ ಕಾರ್ಯಕರ್ತ ಸುರೇಶ ನೇದಲಗಿ ಆಗ್ರಹಿಸಿದ್ದಾರೆ.

ಶಾಲೆಯ ಕಟ್ಟಡ ತುಂಬಾ ಹಳೆಯದಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಾಲೆಯಲ್ಲಿ ಮಕ್ಕಳು ಪಾಠ ಕಲಿಯುವುದಾದರು ಹೇಗೆ?. ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವುದಾದರು ಹೇಗೆ? ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ಶರಣಗೌಡ ಪಾಟೀಲ್ ಒತ್ತಾಯಿಸಿದ್ದಾರೆ.

ಮದಗುಣಿಕಿ ಗ್ರಾಮದಲ್ಲೂ ಶಾಲೆ ಕಟ್ಟಡ ಶಿಥಿಲಾವಸ್ಥೆ:ಆಳಂದ ತಾಲೂಕಿನ‌ ಮದುಗುಣಕಿ ಗ್ರಾಮದಲ್ಲಿಯೂ ಶಾಲೆಯ‌ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳು ಆತಂಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಟ್ಟಡದ ಅವಶೇಷಗಳು ಯಾವಾಗ ಕುಸಿದು ಬೀಳುತ್ತದೆ ಎಂಬ ಭಯದಲ್ಲಿ ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಮದಗುಣಕಿ ಗ್ರಾಮದ‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದು ಕೋಣೆಗಳು ಸಂಪೂರ್ಣವಾಗಿ ಶಿಥಿಲಗೊಂಡಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟ ಆಡದೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ಮಹಾಂತೇಶ ಮದುಗುಣುಕಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಉಕ್ಕಿದ ಗಂಗಾವಳಿ ನದಿ: ಅಂಕೋಲಾದಲ್ಲಿ ಮನೆಗಳಿಗೆ ನುಗ್ಗುತ್ತಿರುವ ನೆರೆ!

ABOUT THE AUTHOR

...view details