ಸರ್ಕಾರ ಬೆನ್ನಿಗಿಲ್ಲದೇ ಕಿಂಗ್ ಪಿನ್ ಆಗಲ್ಲ: ಡಿಕೆ ಶಿವಕುಮಾರ್ ಕಲಬುರಗಿ: ಸರ್ಕಾರದ ಬೆಂಬಲ ಇಲ್ಲದೆ ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಯಾರೂ ಕಿಂಗ್ ಪಿನ್ ಆಗಲು ಸಾಧ್ಯವಿಲ್ಲ, ಮುಖ್ಯಮಂತ್ರಿಗಳು, ಗೃಹಮಂತ್ರಿಗಳು, ಡಿಜಿ ಹೀಗೆ ಎಲ್ಲಾ ಅಧಿಕಾರಿಗಳ ಆಶೀರ್ವಾದ ಇಲ್ಲದೇ ಯಾರು ಕಿಂಗ್ ಪಿನ್ ಆಗಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಂದು ಹೇಳಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಪೋರ್ಟ್ ಇಲ್ಲದೇ ಪರೀಕ್ಷೆಯ ಓಎಂಆರ್ ಶೀಟ್ ತಿದ್ದಲು ಸಾಧ್ಯವಿದೆಯಾ? ಎಂದು ಪ್ರಶ್ನಿಸಿದರು.
ಪ್ರತಿಯೊಂದಕ್ಕೂ ಸರ್ಕಾರದ ಬೆಂಬಲ ಇದೆ, ಎಲ್ಲಾ ಉದ್ಯೋಗದಲ್ಲೂ ಯುವಕರಿಗೆ ಮೋಸವಾಗುತ್ತಿದೆ. ಇಂತಹ ದುಷ್ಟ, ಭ್ರಷ್ಟ ಸರ್ಕಾರವನ್ನು ದೂರ ಮಾಡಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸುತ್ತಾ ಹೊರಟಿದ್ದೇವೆ. ಪ್ರಜಾಧ್ವನಿ ಸಹ ಅದೇ ಕಾರಣಕ್ಕೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಪಿಎಸ್ಐ ಅಕ್ರಮ ನೇಮಕಾತಿಯ ಕಿಂಗ್ಪಿನ್ ಆರ್ಡಿ ಪಾಟೀಲ್ ಒಬ್ಬ ಹೋರಾಟಗಾರ ಎಂದು ಹೇಳಿದ್ದ ಅಫಜಲಪುರ ಶಾಸಕ ಎಂವೈ ಪಾಟೀಲ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಕೊಂಚ ಮುಜುಗರಗೊಂಡ ಡಿ.ಕೆ.ಶಿವಕುಮಾರ್, ಯಾವುದೇ ಪ್ರತಿಕ್ರಿಯೆ ನೀಡದೇ ಸ್ಥಳದಿಂದ ನಿರ್ಗಮಿಸಿದರು.
ಇದನ್ನೂ ಓದಿ:ಬಿಜೆಪಿ ನಾಯಕರಿಗೆ ಭಯ ಶುರುವಾಗಿದೆ: ಸಿದ್ದರಾಮಯ್ಯ ಲೇವಡಿ
ಕಾಂಗ್ರೆಸ್ ಕಾರ್ಯಕರ್ತರು - ವಿಮಾನ ನಿಲ್ದಾಣ ಭದ್ರತಾ ಪೊಲೀಸರ ನಡುವೆ ವಾಗ್ವಾದ :ಯಾದಗಿರಿಯಲ್ಲಿ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮ ನಿಮಿತ್ತ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ ಸೇರಿದಂತೆ ಅನೇಕ ನಾಯಕರು ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರ ಸ್ವಾಗತಕ್ಕಾಗಿ ಲಾಂಜ್ ಒಳಗೆ ಹೋಗಲು ಕೆಲವರಿಗೆ ಮಾತ್ರ ಅನುಮತಿ ನೀಡಲಾಗಿತ್ತು.
ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಡೇವಿಡ್ ಸಿಮೇನಿಯಾ ಕೂಡಾ ಲಾಂಜ್ ಒಳಗೆ ಹೋಗಲು ಪ್ರಯತ್ನಿಸಿದಾಗ ಭದ್ರತಾ ಅಧಿಕಾರಿಗಳು ಅವಕಾಶ ನೀಡಲಿಲ್ಲ, ಮಾಜಿ ಸಭಾಪತಿಯಾದವರಿಗೆ ಒಳಗೆ ಬೀಡುವದಿಲ್ಲ ಯಾಕೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು. ಲಾಂಜ್ ಪ್ರವೇಶ ಮಾಡುವರ ಹೆಸರಿನ ಪಟ್ಟಿಯಲ್ಲಿ ಡೇವಿಡ್ ಅವರ ಹೆಸರು ಇರಲಿಲ್ಲ. ಹಾಗಾಗಿ ನಾವು ಲಾಂಜ್ ಒಳಗೆ ಪ್ರವೇಶ ನೀಡುವುದಿಲ್ಲ ಎಂದು ವಿಮಾನ ನಿಲ್ದಾಣ ಭದ್ರತಾ ಇನ್ಸಪೇಕ್ಟರ್ ಹೇಳಿದಾಗ ಕೆರಳಿದ ಕಾರ್ಯಕರ್ತರು ಬೇಕಾದವರನ್ನು ಬಿಡುತ್ತಿದ್ದಿರಿ, ಕಾಂಗ್ರೆಸ್ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಿರಿ, ಬಿಜೆಪಿ ಏಜೆಂಟ್ ಎಂಬಂತೆ ವರ್ತನೆ ಮಾಡುತ್ತಿದ್ದೀರಿ ಎಂದೆಲ್ಲಾ ವಾಗ್ವಾದ ನಡೆಸಿದರು.
ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕಾಂಗ್ರೆಸ್ ನಾಯಕರು ಬರುವ ವೇಳೆಗೆ ಡೇವಿಡ್ ಅವರನ್ನ ಒಳಗೆ ಬಿಟ್ಟಾಗ ಪರಿಸ್ಥಿತಿ ತಿಳಿ ಗೊಂಡಿತು.
ಇದನ್ನೂ ಓದಿ:ಭವಾನಿ ರೇವಣ್ಣ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿದ್ದು ತಮಾಷೆಗೆ, ಬಂದು ಟಿಕೆಟ್ ಕೇಳಬೇಡಿ: ಸಿ.ಟಿ ರವಿ