ಕಲಬುರಗಿ:ಜಿಲ್ಲೆಯ ಕಾಂಗ್ರೆಸ್ನ ಬಹುತೇಕ ಮುಖಂಡರೇ ಬಿಜೆಪಿಗೆ ಶಿಫ್ಟ್ ಆಗಿದ್ದಾರೆ. ಈ ಬಾರಿ ಗೆಲುವು ನನ್ನದೇ ಎಂದು ಕಲಬುರಗಿ(ಗುಲ್ಬರ್ಗಾ) ಲೋಕಸಭೆ ಚುನಾವಣೆಯ ಬಿಜೆಪಿ ಹುರಿಯಾಳುಡಾ.ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಈಟಿವಿ ಭಾರತ್ದೊಂದಿಗೆ ಮಾತನಾಡಿದ ಅವರು, ಕಲಬುರಗಿ ಲೋಕಸಭೆಗೆ ನಡೆದ 17 ಬಾರಿಯ ಚುನಾವಣೆಯಲ್ಲಿ 15 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮಾಲೀಕಯ್ಯ ಗುತ್ತೇದಾರ, ಎ ಬಿ ಮಾಲಕರೆಡ್ಡಿ, ಬಾಬುರಾವ್ ಚಿಂಚನಸೂರು ಘಟಾನುಘಟಿ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಹೀಗಾಗಿ ಈ ಬಾರಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರ ವಿಷಯವಾಗಿ ನಿನ್ನೆ ವಿಧಾನಸೌಧದಲ್ಲಿ 45 ನಿಮಿಷ ವಿಚಾರಣೆ ಮಾಡಲಾಗಿದೆ. ತೀರ್ಪು ಮಾತ್ರ ಕಾಯ್ದಿರಿಸಲಾಗಿದೆ. ನನಗೆ ಆಗದ 4 ಜನ ಬಂದು ಸ್ಪೀಕರ್ ಮುಂದೆ ನನ್ನ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಯಾವುದೇ ಸಮಸ್ಯೆ ಆಗುವದಿಲ್ಲ. ಅದರ ಬಗ್ಗೆ ತೆಲೆಯೂ ಕೆಡೆಸಿಕೊಳ್ಳುವುದಿಲ್ಲ. ತೀರ್ಪು ನನ್ನ ಪರವಾಗಿ ಬರಲಿದೆ ಎಂದು ಉಮೇಶ್ ಜಾಧವ್ ಹೇಳಿದ್ದಾರೆ.
ಖರ್ಗೆಗೆ ಸವಾಲ್ ಹಾಕಿದ ಜಾಧವ್ ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ ಸೇರಿ 3 ಜನ ಹಾಲಿ ಶಾಸಕರು ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರಂತೆ ನಾನು ಕೂಡ ಲೋಕಸಭೆಗೆ ಸ್ಪರ್ಧಿಸುತ್ತಿದ್ದೇನೆ. ಯಾವುದೇ ರೀತಿಯ ಕಾನೂನು ಅಡೆತಡೆಗಳು ಉಂಟಾಗುವುದಿಲ್ಲ. ಕೆಲಸ ಮಾಡಿದ್ದೇನೆ ಕೂಲಿ ಕೊಡಿ ಎಂದು ಜನರ ಬಳಿ ಮತಯಾಚನೆ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಏನು ಕೆಲಸ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಅವರು ಏನು ಮಾಡಬೇಕಾಗಿತ್ತು? ಏನು ಮಾಡಿಲ್ಲ? ಅನ್ನೋದನ್ನ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಜಾಧವ್ ಹೇಳಿದ್ದಾರೆ.
ನಾನು ಶಾಸಕನಾಗಿದ್ದಾಗ ದಿನದ 24 ಗಂಟೆಗಳ ಜನರಿಗೆ ಲಭ್ಯವಿರುತ್ತಿದ್ದೆ. ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಲೋಕಸಭೆಗೆ ಆರಿಸಿ ಕಳಿಸುವ ಮೂಲಕ ಹೆಚ್ಚಿನ ಕೆಲಸ ಮಾಡಲು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ಬಂಜಾರ ಸಮುದಾಯದ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಚೌಹಾಣ್ ಬಿಜೆಪಿ ಪಕ್ಷ ತೊರೆದಿದ್ದರೂ ಬಂಜಾರ ಸಮುದಾಯದ ಜನ ತನ್ನನ್ನು ಕೈ ಬಿಡುವುದಿಲ್ಲ ಎಂದು ಜಾಧವ್ ಅಭಿಪ್ರಾಯಪಟ್ಟರು.
ಉಮೇಶ್ ಜಾಧವ್ ಪರವಾಗಿ ಪ್ರಚಾರ ಮಾಡಿದರೆ ಕೈ-ಕಾಲು ಕತ್ತರಿಸುವುದಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆಂಬ ಆರೋಪದ ಬಗ್ಗೆ ಮಾತನಾಡಿದ ಜಾಧವ್, ಪ್ರಜಾಪ್ರಭುತ್ವದಲ್ಲಿ ಬೆದರಿಸುವ ಕೆಲಸ ಆಗಬಾರದು. ಈ ಬಗ್ಗೆ ಶೀಘ್ರವೇ ಸಭೆ ನಡೆಸಿ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದರು.