ಕಲಬುರಗಿ :ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜಕುಮರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ತಾರೆ ಎಂಬ ಸುಳಿವನ್ನು ಕಾಂಗ್ರೆಸ್ ಪಕ್ಷದ ಒಬಿಸಿ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಬಿಟ್ಟುಕೊಟ್ಟಿದ್ದಾರೆ. ಗೀತಕ್ಕ ನಾವೆಲ್ಲ ಒಟ್ಟಾಗಿ ಇದ್ದೇವೆ ಸ್ವಲ್ಪ ಇವಾಗ ಬುಸಿನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ನಾನು ಪದೆ ಪದೇ ಅವರನ್ನು ಪಕ್ಷಕ್ಕೆ ಕರೆಯೋಕೆ ಆಗುತ್ತಿಲ್ಲ. ಆದರೆ, ಅವರು ನಮ್ಮ ಜೊತೆ ಇರ್ತಾರೆ ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಗೀತಕ್ಕ ಹೊರತುಪಡಿಸಿ ಶಿವಣ್ಣನನ್ನು ರಾಜಕೀಯಕ್ಕೆ ಕರೆತರುವಂತ ಪ್ರಯತ್ನ ಮಾಡಿಲ್ಲ, ಮಾಡುವುದಿಲ್ಲ ಎಂದೂ ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಈವರೆಗೂ ಗೀತಕ್ಕ ಕಾಂಗ್ರೆಸ್ ಪಕ್ಷದಲ್ಲಿ ಸದಸ್ಯತ್ವ ಪಡೆದುಕೊಂಡಿಲ್ಲ ಹಾಗೂ ಹೆಚ್ಚಾಗಿ ಗುರುತಿಸಿಕೊಂಡಿಲ್ಲ. ಆದರೆ, ನಾನು ಸೊರಬದಿಂದ ಸ್ಪರ್ಧಿಸುತ್ತಿದ್ದು, ಚುನಾವಣೆ ವೇಳೆ ಪ್ರಚಾರಕ್ಕೆ ಗೀತಕ್ಕ ಬರುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದರು. ಇದೇ ವೇಳೆ, ತಮ್ಮ ತಂದೆಯಾದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ರಾಜಕೀಯದ ಜೀವನವನ್ನು ನೆನೆದು, ಅವರ ಧೂಳಿಗೂ ಸಮನಿಲ್ಲ ನಾನು ಎಂದು ಹೇಳಿದರು.
ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಅವರ ವಿರುದ್ದ ಮಧು ಬಂಗಾರಪ್ಪ ಕಿಡಿಕಾಡಿದರು. ರಸ್ತೆ-ಚರಂಡಿ ಸರಿಯಿಲ್ಲ, ಅಭಿವೃದ್ದಿ ಕಾರ್ಯಗಳು ನಡೆದಿವೆ ಎಂದು ಕೇಳಬೇಡಿ, ಲವ್ ಜಿಹಾದ್, ಧರ್ಮದ ವಿಚಾರಗಳನ್ನು ಇಟ್ಟುಕೊಂಡು ಭಾವನತ್ಮಾಕವಾಗಿ ಮತಗಳನ್ನು ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.