ಕಲಬುರಗಿ: ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೈದು, ಪೊಲೀಸ್ ಠಾಣೆಗೆ ದೂರು ನೀಡಿ ಕಪಟ ನಾಟಕವಾಡಿದ್ದ ಪತ್ನಿ ಸೇರಿ ನಾಲ್ವರು ಆರೋಪಿಗಳನ್ನು ಆಳಂದ ತಾಲೂಕಿನ ನಿಂಬರ್ಗಾ ಪೊಲೀಸರು ಬಂಧಿಸಿದ್ದಾರೆ.
ಹುಚ್ಚಪ್ಪ ಬಸರಿಗಿಡದ, ಲಾಡಪ್ಪ ಉದಯಕರ್, ಬಸವರಾಜ ಸಿಂಗೆ ಹಾಗೂ ಕೊಲೆಯಾದ ವ್ಯಕ್ತಿಯ ಪತ್ನಿ ಚಂದ್ರಕಲಾ ನಿಲೂರ ಬಂಧಿತ ಆರೋಪಿಗಳು.
ಇದೇ ಫೆಬ್ರವರಿ 16ರಂದು ನಿಂಬರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಟೇಷನ್ ಗಾಣಗಾಪುರ - ಪಟ್ಟಣಾ ಕ್ರಾಸ್ ಮಧ್ಯದ ಹೊಲವೊಂದರಲ್ಲಿ ಧಂಗಾಪೂರ ಗ್ರಾಮದ ರವಿ ನಿಲೂರ (35) ಎಂಬ ವ್ಯಕ್ತಿಯನ್ನು ಕೊಲೆಗೈದು ಶವ ಬಿಸಾಡಿ ಹೋಗಲಾಗಿತ್ತು.
ತನ್ನ ಗಂಡನ ಸಾವು ಸಾಧಾರಣ ಸಾವಲ್ಲ ಇದೊಂದು ಕೊಲೆ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿ ಮೃತನ ಮಡದಿ, ಆರೋಪಿ ಚಂದ್ರಕಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪ್ರಕರಣದ ದಿಕ್ಕುತಪ್ಪಿಸಲು ಪ್ರಯತ್ನಿಸಿದ್ದಳು. ಆದರೆ ಪ್ರಕರಣದ ಬೆನ್ನಟ್ಟಿದ್ದ ಪೊಲೀಸರು ನಿಜಾಂಶವನ್ನು ಬಯಲಿಗೆಳೆದು ಚಂದ್ರಕಲಾ ಸೇರಿ ನಾಲ್ವರನ್ನು ಜೈಲಿಗೆ ಅಟ್ಟಿದ್ದಾರೆ.
ಆರೋಪಿ ಹುಚ್ಚಪ್ಪ ಹಾಗೂ ಚಂದ್ರಕಲಾ ಮಧ್ಯೆ ಅನೈತಿಕ ಸಂಬಂಧವಿತ್ತು. ಇದಕ್ಕೆ ಅಡ್ಡಿಪಡಿಸುತ್ತಿದ್ದ ರವಿ ನಿಲೂರನನ್ನು ಕೊಲೆಗೈದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.