ಕಲಬುರಗಿ:ಕೊರೊನಾ ಭೀತಿ ನಡುವೆಯೂ ಜನರಿಗೆ ಜೀವಕ್ಕಿಂತ ದೇವರ ರಥೋತ್ಸವವೇ ಹೆಚ್ಚಾಯ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ ಲಾಕ್‌ಡೌನ್ ಇದ್ದರೂ ತಾಲೂಕಿನ ಭೂಸನೂರು ಗ್ರಾಮದಲ್ಲಿ ಜನರು ಏಪ್ರಿಲ್ 15 ರಂದು ಹನುಮಾನ್ ದೇವಸ್ಥಾನದ ತೇರು ಎಳೆದು ಲಾಕ್‌ಡೌನ್ ನಿಯಮ ಉಲ್ಲಂಘಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಳಂದ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಧರ್ಮರಾಜ್ ಸಾಹು ನೇತೃತ್ವದಲ್ಲಿ ಈ ರಥೋತ್ಸವವನ್ನು ನಡೆಸಲಾಗಿದೆ ಎನ್ನಲಾಗಿದೆ. 200 ಕ್ಕೂ ಅಧಿಕ ಜನರು ಈ ರಥೋತ್ಸವದಲ್ಲಿ ಭಾಗವಹಿಸಿದ್ದಾರೆ. ರಥೋತ್ಸವ ಕಾರ್ಯಕ್ರಮ ನಡೆಸದಂತೆ ಗ್ರಾಮಸ್ಥರಿಗೆ ಅಧಿಕಾರಿಗಳು ಸೂಚಿಸಿದ್ದರೂ, ಪಿಡಿಓ ಉಷಾ ಪಾಟೀಲ್ ನಿರ್ಲಕ್ಷ್ಯದಿಂದ ಗ್ರಾಮಸ್ಥರು ರಥೋತ್ಸವ ನಡೆಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಇದು ಜಿಲ್ಲಾಡಳಿತದ ನಿರ್ಲಕ್ಷ್ಯವೋ ಅಥವಾ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೋ ಎಂಬುದು ತಿಳಿದಿಲ್ಲ. ಒಂದೆಡೆ ಆಳಂದ ತಾಲೂಕು, ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿದೆ. ಇನ್ನೊಂದೆಡೆ ಕಲಬುರಗಿ ಜಿಲ್ಲೆಯಲ್ಲೂ ಕೊರೊನಾ ಪಾಸಿಟಿವ್ ತಾಂಡವವಾಡುತ್ತಿದೆ. ಈ ಎಲ್ಲದರ ನಡುವೆ ರಥೋತ್ಸವ ನಡೆದಿದ್ದು, ಇದೀಗ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ವೈರಸ್ ಭೀತಿ ಎದುರಾಗಿದೆ.
ಕಳೆದೆರಡು ದಿನಗಳ ಹಿಂದಷ್ಟೇ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮಸ್ಥರು ಸಿದ್ಧಲಿಂಗೇಶ್ವರ ದೇವರ ರಥೋತ್ಸವ ನೆರವೇರಿಸಿದ್ದರು. ಈ ಸಂಬಂಧ 200 ಜನರ ವಿರುದ್ಧ ಪ್ರಕರಣ ದಾಖಲಿಸಿ ಇಡೀ ರಾವೂರ್ ಗ್ರಾಮವನ್ನೇ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇದೀಗ ಭೂಸನೂರು ಗ್ರಾಮಸ್ಥರಿಗೂ ಕ್ವಾರಂಟೈನ್ ಭೀತಿ ಎದುರಾಗಿದ್ದು, ಹಲವರಿಗೆ ಬಂಧನದ ಭೀತಿಯೂ ಎದುರಾಗಿದೆ.