ಕಲಬುರಗಿ: ಮನೆಯಲ್ಲಿ ಯಾರಾದರೂ ಸತ್ತರೆ ಸಂಬಂಧಿಕರಿಗೆ ವಿಷಯ ತಿಳಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅಧಿಕಾರಿಗಳಿಗೆ ಮೊದಲು ವಿಷಯ ಮುಟ್ಟಿಸಿ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡುವಂತೆ ರೋದಿಸಬೇಕಾದ ಶೋಚನೀಯ ಸ್ಥಿತಿ ಬಂದೊದಗಿದೆ.
ಹೌದು, ಕಲಬುರಗಿ ತಾಲೂಕಿನ ನಂದಿಕೂರು ಗ್ರಾಮಸ್ಥರ ಬಹುದಿನದ ಗೋಳಿದು. ಊರಲ್ಲಿ ಯಾರಾದರೂ ಮೃತಪಟ್ಟರೆ ಶವದ ಮುಂದೆ ಕುಟುಂಬಸ್ಥರ ಆಕ್ರಂದನ ಒಂದೆಡೆಯಾದರೆ, ಮತ್ತೊಂದು ಕಡೆ ಗ್ರಾಮಸ್ಥರು ಪ್ರತಿಭಟನೆ ನಡೆಸುವುದು ಸಾಮಾನ್ಯ ಎನ್ನುವಂತಾಗಿದೆ.
ಈ ಗ್ರಾಮದಲ್ಲಿ ಮತ್ತೊಬ್ಬರು ಸತ್ತಿದ್ದಾರೆ. ಹೂಳಲು ಅವಕಾಶ ಮಾಡಿ ಕೊಡಿ ಎಂದು ಅಧಿಕಾರಿಗಳ ಬಳಿ ಯಾವಾಗಲೂ ಕೇಳಿಕೊಳ್ಳಬೇಕು. ಆದರೆ ಅಧಿಕಾರಿಗಳು ಶವ ಹೂಳಲು ಅವಕಾಶ ಕೊಡದೆ ಪ್ರತೀ ಬಾರಿ ಕೇವಲ ಭರವಸೆ ಕೊಡ್ತಿದ್ದಾರೆ ಹೊರತು ರುದ್ರಭೂಮಿಯನ್ನಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಿನ್ನೆಯಷ್ಟೆ ಗ್ರಾಮದ ಜಯರಾಮ್(28) ಎಂಬಾತ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಶವ ಹೂಳಲು ಸ್ಮಶಾನ ಭೂಮಿ ಇಲ್ಲದ್ದಕ್ಕೆ ಶವವನ್ನು ನಂದಿಕೂರು ತಾಂಡಾದ ಬಸ್ ನಿಲ್ದಾದಲ್ಲಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರಲ್ಲದೆ, ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮಾತುಕತೆ ನಡೆಸಿದ ಬಳಿಕ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.