ಕಲಬುರಗಿ :ಭಾನಾಮತಿ ಮಾಡಿದ್ದಾರೆಂಬ ಶಂಕೆಯಿಂದ ತಾಯಿ, ಮಗ ಹಾಗೂ ಸೊಸೆ ಸೇರಿ ಮೂವರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಚಿಂಚೋಳಿ ತಾಲೂಕಿನ ಪರದಾರ ಮೋತಕಪಳ್ಳಿ ಗ್ರಾಮದಲ್ಲಿ ನಡೆದಿದೆ.
ಪರದಾರ ಮೋತಕಪಳ್ಳಿ ಗ್ರಾಮದ 14 ಜನ ಸೇರಿಕೊಂಡು ಶಿವಲೀಲಾ, ಬಕ್ಕಮ್ಮ ಮತ್ತು ಸಂಗಪ್ಪಾ ಎಂಬುವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಒಂದೇ ಕುಟುಂಬದ ಸದಸ್ಯರಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್.. ಮೋತಕಪಳ್ಳಿ ಗ್ರಾಮದ ನಿವಾಸಿ ಹಣಮಂತ ಭೂತಪುರ ಮತ್ತು ಆತನ 14 ಜನ ಸಂಗಡಿಗರು ಸೇರಿ ಗ್ರಾಮದ ಹನುಮಾನ್ ಮಂದಿರ ಬಳಿಯ ಕಂಬಕ್ಕೆ ಕಟ್ಟಿ ಮೂರು ಜನರಿಗೆ ಕಲ್ಲು ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಹಣಮಂತ ಭೂತಪುರ ಮನೆಯಲ್ಲಿರುವ ವ್ಯಕ್ತಿಗೆ ಹುಷಾರಿರಲಿಲ್ಲ. ಇದಕ್ಕೆ ಈ ಮೂರು ಜವರೇ ಸೇರಿ ಮಾಟ, ಮಂತ್ರ ಮಾಡಿ ತೊಂದರೆ ಕೊಡ್ತಿದ್ದಾರೆ ಅಂತ ಆರೋಪಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತಂತೆ ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಹಲ್ಲೆ ಮಾಡಿರುವ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಓದಿ:ಲಾಕ್‌ಡೌನ್ ಬೇಡ, ಸಮಸ್ಯೆಗೆ ಅದೇ ಪರಿಹಾರವಲ್ಲ : ಡಿಸಿಎಂ ಅಶ್ವತ್ಥ್ ನಾರಾಯಣ