ಕಲಬುರಗಿ :ಆ ಎರಡೂರು ಗ್ರಾಮಸ್ಥರು ನೂರಾರು ವರ್ಷಗಳಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಯಾವಾಗ ಗ್ರಾಮದ ಸುತ್ತಲೂ ಕಲ್ಲು ಗಣಿಗಾರಿಕೆ, ಕಲ್ಲಿನ ಕ್ರಷರ್ ಮಷಿನ್‌ಗಳು ತಲೆ ಎತ್ತಿದವೋ ಅವರ ನೆಮ್ಮದಿಯೇ ಹಾಳಾಗಿದೆ. ಕಲ್ಲು ಗಣಿ, ಕ್ರಷರ್ ಯಂತ್ರಗಳ ಹಾವಳಿಗೆ ಗ್ರಾಮಸ್ಥರು ಬೆಚ್ಚಿ ಬೀಳುತ್ತಿದ್ದು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಕಲ್ಲು ಗಣಿಗಾರಿಕೆಯ ಕ್ರಷರ್ ಶಬ್ದಕ್ಕೆ ಕಂಗಾಲಾದ ಗ್ರಾಮಸ್ಥರು ರಸ್ತೆಗೆ ಹೊಂದಿಕೊಂಡಿರುವ ಕ್ರಷರ್ ಯಂತ್ರಗಳು, ಇನ್ನೊಂದೆಡೆ ಕಲ್ಲು ಗಣಿಗಾರಿಕೆ, ಟಿಪ್ಪರ್‌ಗಳ ಹಾವಳಿ, ಹಾಳಾದ ರಸ್ತೆ, ಮತ್ತೊಂದೆಡೆ ಎತ್ತ ನೋಡಿದ್ರತ್ತ ಆವರಿಸಿರುವ ವಿಪರೀತ ಕಲ್ಲಿನ ಪೌಡರ್ ಧೂಳು.
ಬೆಳೆ ಮೇಲೆ ಧೂಳು ಆವರಿಸಿ ಬೆಳೆ ಹಾನಿ, ನಿತ್ಯ ನರಕಯಾತನೆ ಅನುಭವಿಸುತ್ತಿರುವ ಗ್ರಾಮಸ್ಥರು. ಇದು ಕಲಬುರಗಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಜಲ್ಲಿಕಲ್ಲು ಕ್ರಷರ್ ಮಷೀನ್‌ಗಳಿಂದ ಜನ ಅನುಭವಿಸುತ್ತಿರುವ ಸಮಸ್ಯೆಯ ನೈಜ್ಯ ಚಿತ್ರಣವಾಗಿದೆ.
ಇದು ಕಲಬುರಗಿ ನಗರದ ಹೊರವಲಯ ಬೇಲೂರು, ಬೇಲೂರು ತಾಂಡಾ ಸುತ್ತಮುತ್ತಲಿನಲ್ಲಿಯೇ ಸುಮಾರು ಹದಿನೈದಕ್ಕೂ ಹೆಚ್ಚು ಕ್ರಷರ್ ಮಷೀನ್‌ಗಳು ಇವೆ. ಹತ್ತಾರು ಕಲ್ಲು ಗಣಿಗಾರಿಕೆ ಇದ್ದು ಜನರ ಜೀವ ಹಿಂಡುತ್ತಿವೆ. ಗ್ರಾಮದಿಂದ ಕೇವಲ 500 ಮೀಟರ್ ದೂರದಲ್ಲಿ ಬೆಳ್ಳಂಬೆಳಗ್ಗೆ ಕಲ್ಲು ಗಣಿಯಲ್ಲಿ ಬ್ಲಾಸ್ಟ್ ಮಾಡುತ್ತಿರುವುದರಿಂದ ಮಕ್ಕಳು, ಹಿರಿಯರು ಸದ್ದಿಗೆ ಬೆಚ್ಚಿ ಬೀಳುತ್ತಿದ್ದಾರೆ.
ಕಲ್ಲು ಬ್ಲಾಸ್ಟ್ ಮಾಡಿದ್ರೆ ಒಂದು ಕ್ಷಣ ಭೂಮಿ ನಡುಗಿ ಭೂಕಂಪದ ಅನುಭವ ಆಗುತ್ತಿದೆ. ಕಲ್ಲಿನ ಬ್ಲಾಸ್ಟ್‌ಗೆ ಗ್ರಾಮದಲ್ಲಿ ಹತ್ತಾರು ಮನೆಗಳು ಜಖಂಗೊಂಡು ಬಿರುಕು ಬಿಟ್ಟಿವೆ. ಕಲ್ಲು ಗಣಿಗಾರಿಕೆಯಿಂದ ಜನರು ನಿತ್ಯ ಭಯದಲ್ಲಿಯೇ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಲ್ಲು ಹೊಡೆಯುವ ಕ್ರಷರ್ ಯಂತ್ರಗಳಿಂದ ವಿಪರೀತ ಧೂಳು ಗ್ರಾಮಗಳಿಗೆ ಆವರಿಸುತ್ತಿದೆ. ಯಾವ ಮಟ್ಟಿಗೆ ಅಂದ್ರೆ ಕಿಲೋಮೀಟರ್ ದೂರದವರೆಗೂ ಧೂಳೇ ಧೂಳು. ಹೊಗೆಯ ರೀತಿ ಈ ಸ್ಟೋನ್ ಡಸ್ಟ್ ಪರಿಸರದಲ್ಲಿ ಆವರಿಸುತ್ತಿದೆ.
ಧೂಳು ಜನರ ದೇಹ ಸೇರುತ್ತಿದೆ. ಈ ಡಸ್ಟ್‌ನಿಂದ ನಿತ್ಯ ವಿಷಗಾಳಿ ಕುಡಿಯುತ್ತಿರುವ ಗ್ರಾಮಸ್ಥರು ಅಸ್ತಮಾ, ಹೊಟ್ಟೆ ನೋವು, ಚರ್ಮ ರೋಗ ಹೀಗೆ ನಾನಾ ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತ ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.
ಕ್ರಷರ್ ಮಷಿನ್ ಧೂಳು ಸುತ್ತಲಿನ ರೈತರ ಬೆಳೆ ಮೇಲೆ ಕೆಜಿಗಟ್ಟಲೆ ಬೀಳುತ್ತಿದ್ದು, ಬೆಳೆ ಹಾನಿಯಾಗುತ್ತಿದೆ. ಕ್ರಷರ್ ಯಂತ್ರಗಳ ಮಾಲೀಕರು ಭರ್ಜರಿ ಲಾಭ ಮಾಡ್ತಿದ್ರೆ, ರೈತರು ಪ್ರತಿ ವರ್ಷ ಸೂಕ್ತ ಇಳುವರಿ ಬಾರದೆ ನಷ್ಟ ಅನುಭವಿಸುತ್ತಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರೂಲ್ಸ್ ಪ್ರಕಾರ ರಸ್ತೆಯಿಂದ ಕ್ರಷರ್ ಯಂತ್ರಗಳು ಕನಿಷ್ಠ 50 ಮೀಟರ್ ದೂರದಲ್ಲಿರಬೇಕು. ಆದ್ರೆ, ನಿಯಮಗಳನ್ನ ಗಾಳಿಗೆ ತೂರಿ ರಸ್ತೆಗೆ ಹೊಂದಿಕೊಂಡೆ ಕ್ರಷರ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ.
ವೀಪರಿತ ಸೌಂಡ್ ಮತ್ತು ಡಸ್ಟ್‌ನಿಂದ ಏರ್ ಪೊಲ್ಯೂಷನ್ ಆಗ್ತಿದ್ರು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಮೈನ್ಸ್ ಅಧಿಕಾರಿಯನ್ನ ಕೇಳಿದ್ರೆ, ನಾನು ಈಗ ತಾನೆ ಜಿಲ್ಲೆಗೆ ಬಂದಿದ್ದೇನೆ, ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಅಂತಾರೆ.
ಲೀಗಲ್ ಜೊತೆಗೆ ಅನಧಿಕೃತ ಕಲ್ಲು ಗಣಿಗಾರಿಕೆ, ಕ್ರಷರ್ ಯಂತ್ರಗಳಿವೆ ಅನ್ನೋ ಆರೋಪಗಳಿವೆ. ಆದ್ರೆ, ಈ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಗಲು ರಾತ್ರಿ ಕಲ್ಲು ತುಂಬಿಕೊಂಡು ಟಿಪ್ಪರ್‌ಗಳು ಓಡಾಡುತ್ತಿರೋದ್ರಿಂದ ಆಳುದ್ದ ಗುಂಡಿಗಳು ಬಿದ್ದು ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದೆ. ಇನ್ನಾದರೂ ಎಚ್ಚೆತ್ತು ಕಲ್ಲು ಗಣಿ, ಕ್ರಷರ್‌ನಿಂದ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕಿದೆ.