ಕಲಬುರಗಿ: ಆಕ್ಸಿಜನ್ ಕೊರತೆಯಿಂದ ಇಎಸ್ಐಸಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿರುವ ಬೆನ್ನಲ್ಲೇ, ಮೃತ ಮಹಿಳೆಯ ಮಗನ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
ಮೃತ ಮಹಿಳೆ ಮಗನ ವಿಡಿಯೋ ವೈರಲ್; ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಕಲಬುರಗಿಯಲ್ಲಿ ಆಕ್ಸಿಜನ್ ಕೊರತೆಯಿಂದ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾದ ಆಕೆಯ ಮಗನ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡುವ ಮೂಲಕ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಆಕ್ಸಿಜನ್ ಇಲ್ಲವೆಂದು ಇಎಸ್ಐಸಿಯಿಂದ ಜಿಮ್ಸ್ಗೆ ಮಹಿಳೆಯನ್ನು ಸ್ಥಳಾಂತರ ಮಾಡಲಾಗಿತ್ತು. ಆ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾದ ಘಟನೆಗೆ ಸಂಬಂಧಿಸಿದಂತೆ ಆಕೆಯ ಮಗ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಪ್ರಿಯಾಂಕ್ ಖರ್ಗೆ ಕಿಡಿ:ಮೃತಪಟ್ಟ ಮಹಿಳೆಯ ಮಗನ ವಿಡಿಯೋ ಟ್ವಿಟ್ಟರ್ನಲ್ಲಿ ಶೇರ್ ಮಾಡುವ ಮೂಲಕ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಪ್ರಕರಣದ ವಿರುದ್ಧ ಕಿಡಿಕಾರಿದ್ದಾರೆ. ಇಎಸ್ಐಸಿಯಲ್ಲಿ ಏನೂ ನಡೆದೇ ಇಲ್ಲವೆಂದು ಸರ್ಕಾರ ಹೇಳುತ್ತಿದೆ. ಆದರೆ ಮೃತ ಮಹಿಳೆಯ ಮಗನ ಮಾತುಗಳನ್ನು ಒಮ್ಮೆ ಕೇಳಿನೋಡಿ. ರೋಗಿ ಗುಣಮುಖರಾಗುತ್ತಿದ್ದರೂ ಅವರ ಮನೆಯವರ ಗಮನಕ್ಕೆ ತರದೆ ಇಎಸ್ಐಸಿಯಿಂದ ಜಿಮ್ಸ್ಗೆ ವರ್ಗಾಯಿಸಲಾಗಿದೆ. ಹಾಗೆ ಮಾಡಿರುವುದಕ್ಕೆ ಕಾರಣ ಕೇಳಿದರೆ ಇಎಸ್ಐಸಿನಲ್ಲಿ ಆಕ್ಸಿಜನ್ ಕೊರತೆ ಇದೆಯೆಂದು ಹೇಳಲಾಗಿದೆ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.