ಕಲಬುರಗಿ:ಚಿಂಚೋಳಿ ತಾಲೂಕಿನ ಯಲಕಪಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಜಲ್ಲಿ ಕಲ್ಲು ಗಣಿಗಾರಿಕೆ ಬಗ್ಗೆ ಈಟಿವಿ ಭಾರತ ಮಾಡಿದ ವರದಿಯಿಂದ ಅಧಿಕಾರಿಗಳು ಎಚ್ಚೆತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಕ್ರಮ ಜಲ್ಲಿಕಲ್ಲು ಗಣಿಗಾರಿಕೆ ಬಗ್ಗೆ ವಾಸ್ತವತೆ ಅರಿತ ಸಿಬ್ಬಂದಿಯಿಂದ ಪರಿಶೀಲನೆ ಯಲಕಪಲ್ಲಿ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೆ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆಗಾಗಿ ಲೆಕ್ಕವೇ ಇಲ್ಲದಷ್ಟು ಸ್ಫೋಟ ಮಾಡಲಾಗುತ್ತಿದೆ. ಅಕ್ರಮವಾಗಿ 40ರಿಂದ 50 ಅಡಿ ಆಳ ಭೂಮಿ ಕೊರೆದು ಸ್ಫೋಟ ಮಾಡುತ್ತಿರುವುದರಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಜನರ ಮನೆ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಈಟಿವಿ ಭಾರತ ಸ್ಥಳದ ವಾಸ್ತವತೆ ಕುರಿತು ಕಳೆದ ಮೂರು ದಿನಗಳ ಹಿಂದೆ (ಜೂ.15) ವರದಿ ಮಾಡಿತ್ತು.
ಕಲ್ಲುಗಣಿಗಾರಿಕೆಗೆ ಕಂಗಾಲಾದ ಯಲಕಪಲ್ಲಿ ಗ್ರಾಮಸ್ಥರು: ಜಲ್ಲಿಕಲ್ಲು ಯಂತ್ರ ಸ್ಥಳಾಂತರಕ್ಕೆ ಆಗ್ರಹ
ಅಲ್ಲದೆ ಜೂ. 12ರಂದು ರಾತ್ರಿ 8 ಗಂಟೆ ಸುಮಾರಿಗೆ ಮಾಡಿದ ಸ್ಫೋಟದಿಂದ ಗ್ರಾಮದಲ್ಲಿ ಭೂಕಂಪದ ಅನುಭವವಾಗಿದೆ.ಸ್ಫೋಟದಿಂದ ಗ್ರಾಮದಲ್ಲಿನ ಮನೆಗಳು ಬಿರುಕು ಬಿಟ್ಟಿವೆ ಎಂದು ಸುದ್ದಿಯಲ್ಲಿ ವಿವರಿಸಲಾಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದ್ದಾರೆ. ಈ ಸಂದರ್ಭದಲ್ಲಿ ತಕ್ಷಣ ಜಲ್ಲಿ ಕಲ್ಲು ಅಕ್ರಮ ಗಣಿಗಾರಿಕೆ ನಿಲ್ಲಿಸಿ ಯಂತ್ರಗಳನ್ನು ಸ್ಥಳಾಂತರಿಸಬೇಕು ಎಂದು ಯಲಕಪಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗಣಿಗಾರಿಕೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ವಾಸ್ತವತೆ ಅರಿತಿದ್ದಾರೆ. ಮುಂದಿನ ಕ್ರಮ ಜರುಗಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.