ಕರ್ನಾಟಕ

karnataka

ETV Bharat / state

ಆಳಂದದ ಮಶಾಕ್ ದರ್ಗಾದಲ್ಲಿ ಶಾಂತಿಯುತ ಶಿವರಾತ್ರಿ, ಉರುಸ್ ಆಚರಣೆ - shivaratri celebration in aland dargah

ಕೋರ್ಟ್​ ಆದೇಶದ ಮೇರೆಗೆ ಆಳಂದದ ಲಾಡ್ಲೇ ಮಶಾಕ್ ದರ್ಗಾದಲ್ಲಿ ಉರುಸ್ ಹಾಗೂ ಶಿವರಾತ್ರಿ ಆಚರಣೆಯು ಪೊಲೀಸ್​ ಭದ್ರತೆಯಲ್ಲಿ ಶಾಂತಿಯುತವಾಗಿ ನಡೆದಿದೆ.

urus-and-shivaratri-celebration-in-aland-dargah
ಆಳಂದದ ಮಶಾಕ್ ದರ್ಗಾದಲ್ಲಿ ಶಾಂತಿಯುತ ಶಿವರಾತ್ರಿ, ಉರುಸ್ ಆಚರಣೆ

By

Published : Feb 18, 2023, 8:39 PM IST

Updated : Feb 18, 2023, 9:10 PM IST

ಶಿವರಾತ್ರಿ, ಉರುಸ್ ಆಚರಣೆ ಬಗ್ಗೆ ಎಸ್​ಪಿ ಪ್ರತಿಕ್ರಿಯೆ

ಕಲಬುರಗಿ:ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿ ಇಂದು ಪೊಲೀಸ್ ಸರ್ಪಗಾವಲಿನಲ್ಲಿ ಉರುಸ್ ಹಾಗೂ ಶಿವರಾತ್ರಿ ಆಚರಣೆಯು ಶಾಂತಿಯುತವಾಗಿ ನಡೆಯಿತು. ನ್ಯಾಯಾಲಯದ ಅದೇಶದಂತೆ 14 ಜನ ಮುಸ್ಲಿಂ ಮುಖಂಡರು ದರ್ಗಾದಲ್ಲಿ ಉರುಸ್ ಆಚರಣೆ ಮಾಡಿದರೆ, ಹದಿನೈದು ಮಂದಿ ಹಿಂದೂಗಳು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ನೆರವೇರಿಸಿ ಮಹಾ ಶಿವರಾತ್ರಿ ಆಚರಿಸಿದರು.

ಮಹಾಶಿವರಾತ್ರಿ ದಿನದಂದೇ ದರ್ಗಾದಲ್ಲಿ ಉರುಸ್ ಆಚರಣೆ ಹಾಗೂ ಶಿವಲಿಂಗಕ್ಕೆ ಪೂಜೆ ನಡೆಸುವ ಸಂಬಂಧ ಎರಡೂ ಸಮುದಾಯದವರಿಗೆ ಕಲಬುರಗಿ ವಕ್ಫ್​​ ಟ್ರಿಬುನಲ್ ಕೋರ್ಟ್ ಅವಕಾಶ ಕಲ್ಪಿಸಿತ್ತು. ಬೆಳಗ್ಗೆ 8 ಗಂಟೆಯಿಂದ 12 ಗಂಟೆವರೆಗೆ 15 ಜನ ಮುಸ್ಲಿಮರು ತೆರಳಿ ದರ್ಗಾಕ್ಕೆ ಪೂಜೆ ಸಲ್ಲಿಸಬೇಕು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ತನಕ 15 ಜನ ಹಿಂದೂಗಳು ತೆರಳಿ ಶಿವಲಿಂಗ ಪೂಜೆ ಮಾಡುವಂತೆ ಕಳೆದ 5 ದಿನಗಳ ಹಿಂದೆ ಟ್ರಿಬುನಲ್ ಕೋರ್ಟ್ ಆದೇಶ ಹೊರಡಿಸಿತ್ತು. ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ನೀಡಿದ ವಕ್ಫ್​​ ಟ್ರಿಬುನಲ್ ಕೋರ್ಟ್​ ನೀಡಿದ ಈ ಆದೇಶ ಪ್ರಶ್ನಿಸಿ ದರ್ಗಾ ಕಮಿಟಿಯಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಟ್ರಿಬುನಲ್ ಕೋರ್ಟ್ ಆದೇಶವನ್ನು ಕಲಬುರಗಿ ಹೈಕೋರ್ಟ್ ಪೀಠ ಎತ್ತಿ ಹಿಡಿದಿತ್ತು.

ಶಿವಲಿಂಗಕ್ಕೆ ಪೂಜೆ

ಈ ಆದೇಶ ಪಾಲಿಸಿದ ಎರಡೂ ಧರ್ಮಿಯರು ದರ್ಗಾದಲ್ಲಿ ಉರುಸ್ ಹಾಗೂ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗಿಯಾದರು. ಕೋರ್ಟ್ ಆದೇಶದಂತೆ ಮಧ್ಯಾಹ್ನ 2 ಗಂಟೆ ನಂತರ ಕಡಗಂಚಿ ಶ್ರೀ ವೀರಭದ್ರ ಶಿವಾಚಾರ್ಯ, ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶಾಸಕ ಸುಭಾಷ್ ಗುತ್ತೇದಾರ್, ಬಸವರಾಜ ಮತ್ತಿಮೂಡ್ ಸೇರಿದಂತೆ 15 ಜನರ ತಂಡವು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ನಡೆಸಿತು. ಬಿಲ್ವಪತ್ರೆ, ಇನ್ನಿತರ ಪೂಜೆ ಸಾಮಗ್ರಿಗಳೊಂದಿಗೆ ಪೊಲೀಸ್ ಭದ್ರತೆಯಲ್ಲಿ ಲಾಡ್ಲೇ ಮಶಾಕ್ ದರ್ಗಾ ಪ್ರವೇಶ ಮಾಡಿ, ಪುರಾತನ ಶಿವಲಿಂಗಕ್ಕೆ ಮಹಾ ರುದ್ರಾಭಿಷೇಕ, ಬಿಲ್ವಪತ್ರೆ ಅರ್ಚನೆ, ಮಹಾ ಮಂಗಳಾರತಿ ವಿಶೇಷ ಪೂಜೆ ನೇರವೇರಿಸಿ ಮಹಾಶಿವರಾತ್ರಿ ಆಚರಣೆ ಮಾಡಲಾಗಿದೆ. ಇದಕ್ಕೂ ಮುನ್ನ ಬೆಳಗ್ಗೆ 8 ಗಂಟೆಗೆ ಲಾಡ್ಲೇ ಮಶಾಕ್ ದರ್ಗಾ ಕಮಿಟಿಯ ಮುಸ್ಲಿಂ ಮುಖಂಡರು ಸೇರಿ 14 ಜನರು ದರ್ಗಾದಲ್ಲಿ ಉರುಸ್ ಆಚರಿಸಿದರು.

ಆಳಂದದಲ್ಲಿ 144 ಸೆಕ್ಷನ್ :ದರ್ಗಾದಲ್ಲಿ ಉರುಸ್​ ಹಾಗೂ ಶಿವರಾತ್ರಿ ಪೂಜೆ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಾದ್ಯಂತ 144 ಸೆಕ್ಷನ್​ ಜಾರಿ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್​ ಸೇರಿದಂತೆ ಹಿರಿಯ ಪೊಲೀಸ್​ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪೊಲೀಸ್ ಭದ್ರತೆ ಹಿನ್ನೆಲೆಯಲ್ಲಿ ಹೊರಗಡೆಯಿಂದ ಬರುವವರಿಗೆ ಆಳಂದ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. 1,400ಕ್ಕೂ ಹೆಚ್ಚು ಪೊಲೀಸ್​​ ಸಿಬ್ಬಂದಿಯನ್ನು ಬಂದೋಬಸ್ತ್​​ಗೆ ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ:ಆಳಂದ ದರ್ಗಾದಲ್ಲಿ ಶಿವಲಿಂಗ ಪೂಜೆ ವಿಚಾರ ಟ್ರಿಬುನಲ್ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್

Last Updated : Feb 18, 2023, 9:10 PM IST

ABOUT THE AUTHOR

...view details